ಆನೇಕಲ್ ಬಸವನಪುರ ಗ್ರಾಮದಲ್ಲಿ ಲೀಲಾವತಿ ಎಂಬಾಕೆ ಪ್ರೀತಿಸಿ ಮದುವೆಯಾದ ಗಂಡ, ಮಕ್ಕಳನ್ನು ಬಿಟ್ಟು ಪ್ರಿಯಕರನೇ ಬೇಕೆಂದು ಪಟ್ಟು ಹಿಡಿದಿದ್ದು, ಮನವೊಲಿಸಲು ಪೊಲೀಸರು ಕೂಡ ವಿಫಲರಾಗಿದ್ದಾರೆ.
ಮೂರು ಮಕ್ಕಳು ನಮ್ಮನ್ನು ಬಿಟ್ಟು ಹೋಗಬೇಡ ಎಂದು ಅಳುತ್ತಿದ್ದರೆ, ಮೋಸ ಮಾಡಬೇಡ ಎಂಬುದು ಗಂಡನ ಅಳಲು, ಆದರೆ ಆಕೆ ಮಾತ್ರ ಎಲ್ಲರನ್ನೂ ಬಿಟ್ಟು ಪ್ರಿಯಕರನೇ ಬೇಕು ಎಂದು ಪರಾರಿಯಾಗಿದ್ದಾಳೆ.
ಮದುವೆಯಾಗಿ 11 ವರ್ಷಗಳ ಬಳಿಕ ಗಂಡ, ಸಂಸಾರ, ಮೂರು ಮಕ್ಕಳನ್ನು ಬಿಟ್ಟು ಲೀಲಾವತಿ ಪ್ರಿಯಕರನ ಹಿಂದೆ ಬಿದ್ದಿದ್ದಾಳೆ. ಆಕೆಗೆ ಇತ್ತೀಚೆಗೆ ಸಂತು ಎಂಬಾತನ ಜೊತೆ ಸಂಬಂಧ ಶುರುವಾಗಿತ್ತು, ಅವನೊಂದಿಗೆ ಓಡಾಡುತ್ತಿದ್ದ ಈಕೆ ಕಳೆದ ಕಳೆದ ಭಾನುವಾರ ಆತನೊಂದಿಗೆ ಪರಾರಿಯಾಗಿದ್ದಾಳೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಗಂಡ ಮಂಜುನಾಥ್ ಕಾಣೆಯಾಗಿದ್ದಾಳೆಂದು ದೂರು ದಾಖಲಿಸಿದ್ದಾರೆ. ಬಳಿಕ ಪ್ರಿಯಕರನ ಜೊತೆ ಲೀಲಾವತಿ ಪೊಲೀಸರ ಮುಂದೆ ಹಾಜರಾಗಿದ್ದಾಳೆ. ವಿಚಾರಣೆ ವೇಳೆ ನನಗೆ ಪತಿ ಹಾಗೂ ಮಕ್ಕಳು ಬೇಡ ಎಂದು ಹೇಳಿದ್ದಾಳೆ.
ಗಂಡ ಮಂಜುನಾಥ್, ನನಗೆ ನನ್ನ ಹೆಂಡತಿ ಬೇಕು ಎಂದು ಕಣ್ಣೀರು ಹಾಕಿದ್ದಾರೆ. ಮೂವರು ಮಕ್ಕಳು ನಮ್ಮನ್ನು ಬಿಟ್ಟು ಹೋಗಬೇಡ ಎಂದು ಗೋಗರೆದಿದ್ದಾರೆ. ಆದರೆ ಆಕೆ ಪ್ರಿಯಕರನ ಜೊತೆ ಹೋಗಿದ್ದಾಳೆ.
ಪ್ಲಾಸ್ಟಿಕ್ ಗನ್ ತೋರಿಸಿ ದರೋಡೆ ಮಾಡಿದ್ದ ನಾಲ್ವರ ಬಂಧನ
ಪ್ಲಾಸ್ಟಿಕ್ ಗನ್ ಬಳಸಿ ಜೂನ್ 25ರಂದು ಬೆಂಗಳೂರಿನ ಮಾದನಾಯಕನಹಳ್ಳಿ ವ್ಯಾಪ್ತಿಯ ಮಾಚೋಹಳ್ಳಿಯ ರಾಮ್ ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿ ದರೋಡೆ ಮಾಡಿದ್ದ ನಾಲ್ವರು ಆರೋಪಿಗಳಲ್ಲಿ
ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 30 ಲಕ್ಷ ರೂಪಾಯಿ ಮೌಲ್ಯದ 90 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಬಿಹಾರ, ಉಡುಪಿ, ಕೊಡಗು, ಮತ್ತು ಒರಿಸ್ಸಾ ಮೂಲದ ನಾಲ್ವರನ್ನು ಪತ್ತೆ ಹಚ್ಚಿದ್ದಾರೆ. ಬಂಧಿತ ಆರೋಪಿಗಳನ್ನು ಮೊಹಮ್ಮದ್ ರಫಿಕ್ (36), ನೌಷದ್, ಮತ್ತು ಮೊಹಮ್ಮದ್ ಇಬ್ತೇಕರ್ ಎಂದು ಗುರುತಿಸಲಾಗಿದೆ.


