Menu

ಮಾಲೂರಿನಲ್ಲಿ ಅಮಾವಾಸ್ಯೆ ಪೂಜೆ ಮುಗಿಸಿ ಬರುತ್ತಿದ್ದ ಮಾಟ-ಮಂತ್ರ ಪೂಜಾರಿಯ ಹತ್ಯೆ

ಮಾಲೂರಿನಲ್ಲಿ ಕಾಳಿ ದೇವಿಯ ಆರಾಧಿಸುತ್ತ ಜನರ ದೆವ್ವ, ಗಾಳಿ ಬಿಡಿಸುವ ಕೆಲಸ, ಮಾಟ-ಮಂತ್ರ ಮಾಡಿಕೊಂಡಿದ್ದ ಪೂಜಾರಿ ಸೋಮವಾರ ಪುಷ್ಯ ಅಮಾವಾಸ್ಯೆಯ ಪೂಜೆ ಮುಗಿಸಿಕೊಂಡು ಬರುವಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಹತ್ಯೆ ಮಾಡಿದ್ದಾರೆ.

ಮಾಲೂರು ತಾಲೂಕಿನ ಹರಳೇರಿ ಬಳಿ ಘಟನೆ ನಡೆದಿದ್ದು, ಆಂಜಿ ಅಲಿಯಾಸ್​ ಆಂಜಿನಪ್ಪ(45) ಕೊಲೆಯಾದವರು. ಸ್ಥಳಕ್ಕೆ ಮಾಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆಂಜಿನಪ್ಪ ಮಾಲೂರಿನಲ್ಲಿ ಬೂಸಾ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು.

ಹಿಂದೂ ಸಮಾಜೋತ್ಸವ ಸಮಿತಿ ವತಿಯಿಂದ ಮಾಲೂರು ಪಟ್ಟಣದ ಹೋಂಡಾ ಸ್ಟೇಡಿಯಂನಲ್ಲಿ ಹಿಂದೂ ಸಮಾಜೋತ್ಸವ ಆಯೋಜನೆ ಮಾಡಲಾಗಿತ್ತು. ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇನ್ನೇನು ಕಾರ್ಯಕ್ರಮ ಅಂತಿಮ ಹಂತ ತಲುಪುವಾಗ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಮಾಲೂರು ಪೊಲೀಸರಿಗೆ ಲಭಿಸಿದೆ.

ಸ್ಥಳಕ್ಕೆ ಬಂದ ಪೊಲೀಸರಿಗೆ ಹುಲ್ಕೂರು ಗ್ರಾಮದ ಕಾಳಿ ದೇವಾಲಯದ ಪೂಜಾರಿ ಆಂಜಿನಪ್ಪರನ್ನು ದುಷ್ಕರ್ಮಿಗಳು ಮುಖಕ್ಕೆ ಖಾರದಪುಡಿ ಎರಚಿ ಲಾಂಗ್‌ನಿಂದ ಹತ್ಯೆ ಮಾಡಿ ಪರಾರಿಯಾಗಿರುವುದು ಕಂಡು ಬಂದಿದೆ. ಆಂಜಿನಪ್ಪ ಅವರಿಗೆ ಮೂವತ್ತು ವರ್ಷಗಳ ಹಿಂದೆ ಚಿಂತಾಮಣಿ ಮೂಲದ ವಿಜಿಯಮ್ಮ ಜೊತೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದು, ಮದುವೆಯಾಗಿದೆ. ಐದು ವರ್ಷಗಳ ಹಿಂದೆ ಬೆಂಗಳೂರು ​ ನಿವಾಸಿ ಸಂಗೀತ ಎಂಬವರನ್ನು ಎರಡನೇ ಮದುವೆ ಮಾಡಿಕೊಂಡಿದ್ದರು.

ಐದು ವರ್ಷಗಳ ಹಿಂದೆ ಹುಲ್ಕೂರಿನಲ್ಲಿ ಕಾಳಿ ದೇವಾಲಯ ನಿರ್ಮಾಣ ಮಾಡಿ ಪೂಜೆ ಮಾಡಿಕೊಂಡು ಮಾಟ-ಮಂತ್ರ ಮಾಡಿಕೊಂಡು ಸ್ವಲ್ಪ ಹಣ ಸಂಪಾದನೆ ಮಾಡಿಕೊಂಡಿದ್ದರು. ಒಂದಷ್ಟು ಜನರಿಗೆ ಸಹಾಯ ಮಾಡಿಕೊಂಡಿದ್ದ ಆಂಜಿನಪ್ಪ ಮೇಲೆ ಗ್ರಾಮದ ಜನರಿಗೆ ಒಳ್ಳೆಯ ಅಭಿಪ್ರಾಯವಿತ್ತು. ರಾಜ್ಯದ ನಾನಾ ಭಾಗಗಳಿಂದ ಜನರು ಸಮಸ್ಯೆಗಲೊಂದಿಗೆ ಬರುತ್ತಿದ್ದರು. ಅವರಿಗೆ ಆಂಜಿನಪ್ಪ ಪರಿಹಾರ ನೀಡುತ್ತಿದ್ದರು.

ಗ್ರಾಮದಲ್ಲಿ ದೇವಾಲಯದ ನಿರ್ಮಾಣದ ವೇಳೆ ಗ್ರಾಮದ ಸ್ಮಶಾನ ಒತ್ತುವರಿ ಮಾಡಿಕೊಂಡಿದ್ದಾರೆ ವಿಚಾರವಾಗಿ ಕೆಲವರೊಂದಿಗೆ ಮನಸ್ತಾಪವಾಗಿತ್ತು ಎನ್ನಲಾಗುತ್ತಿದೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಮಾಲೂರು ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *