ಬೆಂಗಳೂರು: “ಖ್ಯಾತ ವಿಜ್ಞಾನಿ ಡಾ. ಕಸ್ತೂರಿ ರಂಗನ್ ಅವರ ನಿಧನದಿಂದ ಅಪಾರ ಜ್ಞಾನ ಸಂಪತ್ತನ್ನು ಕಳೆದುಕೊಂಡಿದ್ದೇವೆ. ಇವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಬೇಡಿಕೊಳ್ಳುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕಸ್ತೂರಿ ರಂಗನ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ನಂತರ ಶಿವಕುಮಾರ್ ಅವರು ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು.
“ನಾಡು ಮತ್ತು ಕಾಡಿನ ಸಂಪತ್ತು ಉಳಿಯಲು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡವರು ಕಸ್ತೂರಿ ರಂಗನ್ ಅವರು. ಭಾರತದ ಹಾಗೂ ಪ್ರಪಂಚದ ಶ್ರೇಷ್ಠ ವಿಜ್ಞಾನಿಗಳಾಗಿದ್ದ ಕಸ್ತೂರಿ ರಂಗನ್ ಅವರು ಜ್ಞಾನ ಆಯೋಗದ ಅಧ್ಯಕ್ಷರಾಗಿ, ರಾಜ್ಯಸಭಾ ಸದಸ್ಯರಾಗಿ ಸಮಾಜಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಸಾವು ಖಚಿತ, ಆದರೆ ನಾವು ಏನು ಕೊಡುಗೆಗಳನ್ನು ಬಿಟ್ಟು ಹೋಗುತ್ತೇವೆ ಎನ್ನುವುದು ಮುಖ್ಯ” ಎಂದು ಹೇಳಿದರು.
“ಸರ್ಕಾರ ಇವರ ಕೊಡುಗೆಗಳ ಬಗ್ಗೆ ಚರ್ಚಿಸಿ, ಅವುಗಳನ್ನು ಉಳಿಸುವ ಕೆಲಸ ಮಾಡಲಾಗುವುದು. ಇಸ್ರೋಗೆ ದೊಡ್ಡ ಹೆಸರು ಬರಲು ಇವರ ಕೊಡುಗೆ ಅಪಾರ” ಎಂದು ಸ್ಮರಿಸಿದರು.