ಬೆಂಗಳೂರು: ಭಾರತ ಬಲಿಷ್ಠವಾಗಿದೆ, ಪಾಕಿಸ್ತಾನದ ದಾಳಿಯನ್ನು ಸಮರ್ಥವಾಗಿ ಎದುರಿಸಿ, ಮಟ್ಟಹಾಕಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಕೆ.ಆರ್ ವೃತ್ತದಿಂದ ಮಿನ್ಸ್ಕ್ ಸ್ಕ್ವೇರ್ ವೃತ್ತದವರೆಗೂ ಶುಕ್ರವಾರ ನಡೆದ ಜೈ ಹಿಂದ್ ತಿರಂಗಾ ಯಾತ್ರೆ ವೇಳೆ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
ನಿನ್ನೆ ರಾತ್ರಿ ಪಾಕಿಸ್ತಾನ ಜಮ್ಮು ಕಾಶ್ಮೀರದ ಮೇಲೆ ದಾಳಿ ಮಾಡಿರುವ ಬಗ್ಗೆ ಕೇಳಿದಾಗ, “ದೇಶ ಇದನ್ನು ಸಮರ್ಥವಾಗಿ ಎದುರಿಸಲಿದೆ. ಇಂದಿರಾ ಗಾಂಧಿ ಅವರ ಕಾಲದಲ್ಲಿ ಹೇಗೆ ಪಾಕಿಸ್ತಾನವನ್ನು ಬಗ್ಗುಬಡಿಯಲಾಗಿತ್ತೋ, ಅದೇ ರೀತಿ ಈ ಬಾರಿಯೂ ಭಾರತ ಈ ಪರಿಸ್ಥಿತಿಯನ್ನು ಎದುರಿಸಿ ಗೆಲ್ಲಲಿದೆ” ಎಂದು ತಿಳಿಸಿದರು.
ತಿರಂಗಾ ಯಾತ್ರೆ ಬಗ್ಗೆ ಕೇಳಿದಾಗ, “ಕರ್ನಾಟಕದಲ್ಲಿ ಜೈ ಹಿಂದ್ ತಿರಂಗ ಯಾತ್ರೆ ಆಯೋಜಿಸಲಾಗಿತ್ತು. ನಮ್ಮ ಸೇನೆಯ ಯೋಧರು ದೇಶ ರಕ್ಷಣೆಗೆ ಹೋರಾಟ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ತೀರ್ಮಾನವನ್ನು ಎಲ್ಲರೂ ಒಟ್ಟಾಗಿ ಬೆಂಬಲಿಸಬೇಕು. ಹೀಗಾಗಿ ಈ ಯಾತ್ರೆ ನಡೆಸಲಾಗಿದೆ. ಇದಕ್ಕೆ ಸಮಾಜದ ಎಲ್ಲಾ ವರ್ಗದವರನ್ನು ಆಹ್ವಾನಿಸಲಾಗಿತ್ತು. ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಸಂಘಸಂಸ್ಥೆಗಳು ಸೇರಿದಂತೆ ಎಲ್ಲರಿಗೂ ಆಹ್ವಾನಿಸಲಾಗಿತ್ತು. ಈ ಯಾತ್ರೆಗೆ ಕರೆ ಕೊಟ್ಟ ಅಲ್ಪಾವಧಿಯಲ್ಲಿ ಎಲ್ಲಾ ವರ್ಗದ ಜನರು ಭಾರಿ ಪ್ರಮಾಣದಲ್ಲಿ ಆಗಮಿಸಿರುವುದಕ್ಕೆ ಧನ್ಯವಾದಗಳು” ಎಂದು ತಿಳಿಸಿದರು.
ಭಯೋತ್ಪಾದನೆಗೆ ಇತಿಶ್ರೀ ಹಾಡಲು ಇದು ಸೂಕ್ತ ಸಮಯವೇ ಎಂದು ಕೇಳಿದಾಗ, “ನಮ್ಮ ಸೇನೆಯವರು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುತ್ತಿದ್ದಾರೆ. ಅವರ ಕಾರ್ಯವೈಖರಿ ಬಗ್ಗೆ ಬಹಳ ಹೆಮ್ಮೆ ಇದೆ. ಸೈನಿಕರು ನಮ್ಮ ಬಾವುಟವನ್ನು ಉತ್ತುಂಗದಲ್ಲಿ ಹಾರುವಂತೆ ಮಾಡಿದ್ದಾರೆ. ಅವರಿಗೆ ನಾವೆಲ್ಲರೂ ಒಟ್ಟಾಗಿ ಬೆಂಬಲ ಸೂಚಿಸಬೇಕು. ಭಯೋತ್ಪಾದನೆ ನಿರ್ಮೂಲನೆಯಾಗಬೇಕು” ಎಂದರು.
ಸೇನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಪ್ರವೇಶ ಮಾಡಬೇಕೆ ಎಂದು ಕೇಳಿದಾಗ, “ಈ ವಿಚಾರವಾಗಿ ನಾನು ಈಗ ಚರ್ಚೆ ಮಾಡುವುದಿಲ್ಲ. ಕೇಂದ್ರ ಸರ್ಕಾರ ಹಾಗೂ ಸೇನೆ ಈ ವಿಚಾರವಾಗಿ ತೀರ್ಮಾನ ಕೈಗೊಳ್ಳಲಿದೆ” ಎಂದು ತಿಳಿಸಿದರು.