ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಆಚಂಪಲ್ಲಿ ಗ್ರಾಮದಲ್ಲಿ ರಜೆಯ ಮೇಲೆ ಊರಿಗೆ ಬಂದಿದ್ದ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮುನಿ ನಾರಾಯಣ ಹೃದಯಾಘಾತದಿಂದ ಮೃತಪಟ್ಟವರು. ಮುನಿ ನಾರಾಯಣ ಬರ್ಮಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ಕಳೆದ ಎರಡು ತಿಂಗಳ ಹಿಂದೆ ರಜೆಯ ಮೇಲೆ ಊರಿಗೆ ಬಂದಿದ್ದರು.
ರಾತ್ರಿ ಮಲಗಿದ್ದಾಗ ಹೃದಯಾಘಾತದಿಂದ ಅಸು ನೀಗಿದ್ದು, ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಆಚಂಪಲ್ಲಿ ಗ್ರಾಮದಲ್ಲಿ ಮುನಿ ನಾರಾಯಣ ಅಂತ್ಯಸಂಸ್ಕಾರ ನಡೆಯಲಿದೆ.
ಒಂದೇ ಗ್ರಾಮದ ಮೂವರು ಯುವತಿಯರ ಆತ್ಮಹತ್ಯೆ ಯತ್ನ
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕೆ.ಇರಬೇರಾ ಗ್ರಾಮದಲ್ಲಿ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೂವರಲ್ಲಿ 17 ವರ್ಷದ ರೇಣುಕಾ ಎಂಬ ಯುವತಿ ಮೃತಪಟ್ಟಿದ್ದರೆ ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂವರು ಯುವತಿಯರಲ್ಲಿ ತಿಮ್ಮಕ್ಕ ಮೊದಲು ವಿಷ ಸೇವಿಸಿದ್ದಾಳೆ. ನಂತರ ರೇಣುಕಾ ಮತ್ತು ಸುನಿತಾ ವಿಷ ಸೇವನೆ ಮಾಡುವುದನ್ನು ಮತ್ತೊಬ್ಬ ಯುವತಿ ತಡೆದಿದ್ದಾಳೆ. ನಂತರ ತಿಮ್ಮಕ್ಕ ಸತ್ತಿದ್ದಾಳೆ ಎಂದು ತಿಳಿದು ರೇಣುಕಾ ಮತ್ತು ಸುನಿತಾ ಬಾವಿಗೆ ಜಿಗಿದಿದ್ದಾರೆ. ಕೂಡಲೇ ಸ್ಥಳೀಯರು ಬಾವಿಯಲ್ಲಿದ್ದ ಇಬ್ಬರನ್ನು ಮೇಲೆಕ್ಕೆತ್ತಿದ್ದಾರೆ. ಅಷ್ಟರಲ್ಲಿ ರೇಣುಕಾ ಅಸುನೀಗಿದ್ದಾಳೆ. ತಿಮ್ಮಕ್ಕ ಮತ್ತು ಸುನಿತಾ ರಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂವರೂ ಜಮೀನಿನ ಕೆಲಸಕ್ಕೆ ಬಂದಿದ್ದರು. ಆರೋಗ್ಯ ಸರಿ ಇಲ್ಲ ಎಂದು ಹೋಗಿ ವಿಷ ಕುಡಿದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರು ಕುಟುಂಬಸ್ಥರಿಂದ ಹೇಳಿಕೆ ದಾಖಲಿಸಿಕೊಂಡು ಎಲ್ಲಾ ಆಯಾಮದಲ್ಲಿ ತನಿಖೆ ಆರಂಭಿಸಿದ್ದಾರೆ. ಈ ಘಟನೆ ಕೆ.ಇರಬಗೇರಾ ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ.