ಯಾವುದೇ ಊರಲ್ಲಿ ಆಸ್ಪತ್ರೆ-ಮೆಡಿಕಲ್ ಶಾಪ್ ಗಳಿಗಿಂತ ಕ್ರೀಡಾಂಗಣಗಳು-ಗರಡಿ ಮನೆಗಳು ಹೆಚ್ಚಾಗಿದ್ದರೆ ಅದು ಆರೋಗ್ಯಕರ ಊರಿನ ಲಕ್ಷಣ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದ್ದಾರೆ.
ಹಾಸನದ ಅರಕಲಗೂಡಿನಲ್ಲಿ ಶ್ರೀ ರಾಘವೇಂದ್ರ ಯೂತ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ “ಸಿದ್ದರಾಮಯ್ಯ ಕಪ್” ಸೀಸನ್ -3 ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ಒಂದು ಊರು ಎಷ್ಟು ಆರೋಗ್ಯಕರವಾಗಿದೆ, ಚೈತನ್ಯಶಾಲಿಯಾಗಿದೆ ಅನ್ನೋದು ಆ ಊರಿನ ಮೈದಾನಗಳು, ಕ್ರೀಡಾಂಗಣಗಳು, ಗರಡಿ ಮನೆಗಳು, ಜಿಮ್ ಗಳು, ಪಾರ್ಕ್ ಗಳು ಎಷ್ಟು ತುಂಬಿರುತ್ತವೆ ಅನ್ನೋದನ್ನು ನೋಡಿದರೆ ಗೊತ್ತಾಗುತ್ತದೆ ಎಂದರು.
15 ವರ್ಷಗಳ ಹಿಂದೆ ತುಂಬು ಉತ್ಸಾಹದಿಂದ ಸಣ್ಣದಾಗಿ ಶುರುವಾದ ಸ್ಪೋರ್ಟ್ಸ್ ಕ್ಲಬ್ ಈಗ ದೊಡ್ಡಮಟ್ಟಕ್ಕೆ ವಿಸ್ತರಿಸಿದೆ.ಅರಕಲಗೂಡು ಕ್ರಿಕೆಟ್ ಪಂದ್ಯಾವಳಿ ಹಾಸನ ಜಿಲ್ಲೆಯ ಹೊರಗೂ ಸದ್ದು ಮಾಡುತ್ತಿದೆ. ಇದಕ್ಕೆ ಯುವ ಮುಖಂಡಅರಕಲಗೋಡು ಪ್ರಸನ್ನನ ಮತ್ತು ತಂಡದ ಶ್ರಮ ಕಾರಣ. ಪ್ರಸನ್ನ ಹೆಸರಿಗೆ ಮಾತ್ರ “ಪ್ರಸನ್ನ”. ಆದ್ರೆ ಈತ ಪ್ರಸನ್ನನಾಗಿ ಇರೋದೇ ಕಡಿಮೆ.ಹಠ ಹಿಡಿದ್ರೆ ಮುಗೀತು. ಪರಿಣಾಮ ಯೋಚನೆ ಮಾಡದೆ ಕೆಲಸ ಆಗುವವರೆಗೂ ಬೆನ್ನು ಬೀಳ್ತಾರೆ. ಇದರ ಪರಿಣಾಮದಿಂದ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದ ನವೀಕರಣಕ್ಕಾಗಿ 25 ಲಕ್ಷ ರೂಪಾಯಿ ಅನುದಾನ ಒದಗಿ ಬರುವ ಹಂತದಲ್ಲಿದೆ. ಮುಂದಿನ ವರ್ಷವೂ ಇನ್ನೂ 25 ಲಕ್ಷ ಬೇಕು ಅನುದಾನ ಕೊಡುವಂತೆ ಪ್ರಸನ್ನ ಅವರ ಕ್ರಿಯಾಶೀಲ ತಂಡ ಈಗಲೇ ಅಪ್ಲಿಕೇಷನ್ ಹಾಕಿದ್ದಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.
ಇಂಥಾ ಕ್ರೀಡಾಕೂಟಗಳು ಹೆಚ್ಚೆಚ್ಚು ನಡೆಯಲಿ, ಕ್ರೀಡಾ ಮನೋಭಾವ ಹೆಚ್ಚಾಗಲಿ ಎಂದು ಕೆ.ವಿ.ಪ್ರಭಾಕರ್ ಅವರು ಹಾರೈಸಿದರು.