ಹಾಸನದ ಅಧಿದೇವತೆ ಹಾಸನಾಂಬೆ ದೇವಿ ದರ್ಶನಕ್ಕೆ ಭಕ್ತಸಾಗರವೇ ಹರಿದು ಬರುತ್ತಿದ್ದು, ಸೋಮವಾರದ ಅಂತ್ಯಕ್ಕೆ 23 ಲಕ್ಷ ಭಕ್ತರು ಭೇಟಿ ನೀಡಿದ್ದು, ನಾಳೆ ದರ್ಶನಕ್ಕೆ ಕೊನೆಯ ದಿನವಾಗಿದೆ.
ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಹಂಚಿಕೊಂಡಿದ್ದು, ಸೆಪ್ಟೆಂಬರ್ 22ರಿಂದ ಇಲ್ಲಿಯವರೆಗೆ 23 ಲಕ್ಷ ಜನರು ಹಾಸನಾಂಬೆ ದೇವಿಯ ದರ್ಶನ ಪಡೆದಿದ್ದಾರೆ ಎಂದರು.
ದರ್ಶನ ಬಹಳ ಸರಾಗವಾಗಿ ನಡೆಯುತ್ತಿದೆ. ಸೋಮವಾರ ಸುಮಾರು 2 ಲಕ್ಷ ಜನರು ದರ್ಶನ ಪಡೆದಿದ್ದಾರೆ. ಪ್ರಸ್ತುತ ವರ್ಷ ಇಲ್ಲಿಯವರೆಗೆ 23,00,000 ಜನರು ದರ್ಶನ ಪಡೆದಿದ್ದು, ಕಳೆದ ವರ್ಷದ ಒಟ್ಟಾರೆ 17,46,000 ಜನ ದರ್ಶನ ಪಡೆದ ದಾಖಲೆ ಮುರಿದಿದೆ ಎಂದಿದ್ದಾರೆ.
ಈ ವರ್ಷ 300 ಮತ್ತು 1000 ರೂ. ಮುಖಬೆಲೆಯ ಟಿಕೆಟ್ ಪಡೆದವರ ಸಂಖ್ಯೆ 3,40,260 ಜನರು ದರ್ಶನ ಪಡೆದಿದ್ದಾರೆ. ಕಳೆದ ವರ್ಷ ಈ ಸಾಲಿನಲ್ಲಿ ಒಟ್ಟಾರೆ 1,29,956 ಜನ ದರ್ಶನ ಪಡೆದಿದ್ದರು.ಈ ವರ್ಷ ಟಿಕೆಟ್ ಮಾರಾಟದಿಂದ ದಾಖಲೆ ಆದಾಯ ಬಂದಿದೆ ಎಂದು ಅವರು ಹೇಳಿದರು.
ಮಂಗಳವಾರ ಮತ್ತು ಬುಧವಾರ ದರ್ಶನ ಲಭ್ಯವಿದೆ. ಸೋಮವಾರ ಮಧ್ಯಾಹ್ನ 2 ರಿಂದ 3.30 ರವರೆಗೆ ನೈವೇದ್ಯ ಇರುವುದರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಸೋಮವಾರ ಸರತಿ ಸಾಲಿನಲ್ಲಿ ಪ್ರವೇಶ ದ್ವಾರಗಳು ರಾತ್ರಿ 9 ಗಂಟೆಗೆ ಮುಚ್ಚಲ್ಪಡುತ್ತವೆ ಮತ್ತು ದರ್ಶನ ಮಧ್ಯರಾತ್ರಿ 12 ಗಂಟೆಗೆ ಮಾತ್ರ ಇರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬುಧವಾರ – ದರ್ಶನ ಬೆಳಿಗ್ಗೆ 5 ರಿಂದ ಪ್ರಾರಂಭವಾಗಿ ಸಂಜೆ 7 ಗಂಟೆಯವರೆಗೆ ನಿರಂತರವಾಗಿ ಮುಂದುವರಿಯುತ್ತದೆ. ಸಾರ್ವಜನಿಕ ದರ್ಶನ ಸಂಜೆ 7 ಗಂಟೆಗೆ ಮುಗಿಯುತ್ತದೆ. ಹಾಸನಾಂಬೆ ದೇವಿಯ ದರ್ಶನಕ್ಕೆ ನಾಳೆ ಕೊನೆಯ ದಿನವಾಗಿದ್ದು, ಅದರ ನಂತರ ಅಂದರೆ ಗುರುವಾರದಿಂದ ಸಾರ್ವಜನಿಕ ದರ್ಶನವಿಲ್ಲ ಎಂದು ಕೃಷ್ಣ ಭೈರೇಗೌಡ ಸ್ಪಷ್ಟಪಡಿಸಿದ್ದಾರೆ.


