ನವೆಂಬರ್ ತಿಂಗಳಿನಲ್ಲಿ ಕ್ರಾಂತಿ ಆಗುವುದು ಕಾಂಗ್ರೆಸ್‌ನಲ್ಲಿ ಅಲ್ಲ, ಬಿಜೆಪಿಯಲ್ಲಿ ಕ್ರಾಂತಿ ಆಗಲಿದೆ. ಹೀಗಾಗಿ ಅವರು ಆ ವಿಚಾರವನ್ನು ಹೇಳಿಕೊಂಡು ಬರುತ್ತಿದ್ದಾರೆ ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ವ್ಯಂಗ್ಯವಾಡಿದ್ದಾರೆ.
ಕೋಲಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರಿಗೆ ಚರ್ಚಿಸಲು ವಿಷಯವಿಲ್ಲ. ಅದ್ದರಿಂದಲೇ ಅವರಲ್ಲಿ ಆಗುವ ಕ್ರಾಂತಿ ಬಗ್ಗೆ ಮಾತನಾಡುತ್ತಿದ್ದಾರೆ. ಯತ್ನಾಳ್, ವಿಜಯೇಂದ್ರ, ಅಶೋಕ ಎಂದು ಕಿತ್ತಾಡುತ್ತಿದ್ದು, ಅದರಿಂದಲೇ ಕ್ರಾಂತಿ ಸಾಧ್ಯತೆಯಿದೆ ಎಂದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ, ಹೈಕಮಾಂಡ್ ಹಂತದಲ್ಲಿ ಚರ್ಚೆಯಾಗಿದ್ದು, ಯಾವುದೇ ರೀತಿ ತೀರ್ಮಾನಕ್ಕೂ ಸಿಎಂ, ಡಿಸಿಎಂ ಹಾದಿಯಾಗಿ ಎಲ್ಲಾ ಸಚಿವರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದು ಹೇಳಿದರು.
ದಲಿತ ಸಮುದಾಯದ ಸಿಎಂ ಆಗಬೇಕು ಎಂದು ಕೇಳುವುದರಲ್ಲಿ ತಪ್ಪೇನಿಲ್ಲ. ಪ್ರತ್ಯೇಕ ಸಮುದಾಯದವರು ತಮ್ಮ ತಮ್ಮ ಸಮುದಾಯದ ನಾಯಕರಿಗೆ ಕೇಳುವುದರಲ್ಲಿ ತಪ್ಪೇನಿದೆ. ಹಕ್ಕು ಮಂಡನೆ ಮಾಡಲು ಎಲ್ಲರಿಗೂ ಅವಕಾಶವಿದೆ. ಆಂತರಿಕ ಪ್ರಜಾಪ್ರಭುತ್ವ ಇರುವುದು ಕಾಂಗ್ರೆಸ್‌ನಲ್ಲಿ ಮಾತ್ರ ಎಂದು ಹೇಳಿದ ಅವರು, ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವಿಲ್ಲವೆಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಿ ನಮ್ಮನ್ನು ಸಿಎಂ ಮಾಡಿ ಅಂತ ಯಾರೂ ಕೇಳುತ್ತಿಲ್ಲ. ಅವಕಾಶ ಬಂದರೆ ಪರಿಗಣಿಸಿ ಅಂತ ಕೆಲವರು ಅಭಿಪ್ರಾಯ ತಿಳಿಸಿದ್ದಾರೆ. ಕೆ.ಎಚ್.ಮುನಿಯಪ್ಪ ೭ ಬಾರಿ ಸಂಸದರು ಆಗಿದ್ದು, ಇದೀಗ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ರೀತಿ ಅರ್ಹತೆಯಿದೆ. ನಂಜೇಗೌಡರು ಸಹ ತಾಪಂ ಸ್ಥಾನದಿಂದ ಶಾಸಕರಾಗಿದ್ದಾರೆ. ಸಚಿವರು ಆಗುವ ಅರ್ಹತೆಯಿದ್ದು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಜಿಲ್ಲೆಗೆ ಸಿಎಂ ಬರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೆಡಿಪಿ ಸಭೆ ಹಾಗೂ ಯರಗೋಳ್ ಡ್ಯಾಂ ಉದ್ಘಾಟನೆಗೆ ಬಂದು ಹೋಗಿದ್ದಾರೆ. ಮತ ಮರು ಎಣಿಕೆಗೂ ಸಿಎಂ ಬರುವುದಕ್ಕೂ ಏನು ಸಂಬಂಧವಿಲ್ಲ. ಸಮಯ ನೋಡಿಕೊಂಡು ಆಗಮಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.


