ದೇಶದಲ್ಲಿಂದು ಮೈತ್ರಿ ರಾಜಕಾರಣ ಅನಿವಾರ್ಯ. ಆದರೆ ಇದನ್ನು ಯಾವ್ಯಾವ ಸಮಯದಲ್ಲಿ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಮತ್ತು ಮುರಿಯಬೇಕೆಂಬ ತೀರ್ಮಾನಗಳಿಗೆ ದೇವೇಗೌಡ, ನಿತೀಶ್‌ಕುಮಾರ್ ಶರತ್ ಪವಾರ್ ಮತ್ತು ಚಂದ್ರಬಾಬು ನಾಯಡು ಅವರೇ ಸಾಟಿ.
ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಕವಲುದಾರಿಯಲ್ಲಿದೆ ! ಮಾಜಿ ಪ್ರಧಾನಿಗಳೂ ಆದ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ, ಉಭಯ ಪಕ್ಷಗಳ ಮೈತ್ರಿ ವಿದಾಯದ ಬಗ್ಗೆ ಸ್ಪಷ್ಟ ಮಾತುಗಳನ್ನು ಆಡಿದ್ದಾರೆ. ರಾಜ್ಯದಲ್ಲಿ ಬಹುದಿನಗಳಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆದಿಲ್ಲ. ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಜೆಡಿಎಸ್ ಬೇರುಗಳು ಗಟ್ಟಿಯಾಗಿಯೇ ಉಳಿದಿವೆ ಎಂಬುದು ದಳಪತಿಗಳ ಅಚಲ ನಂಬಿಕೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೈತ್ರಿ ಬೇಡ ಎಂದೆನ್ನುವ ಜೆಡಿಎಸ್, ಮುಂದಿನ ದಿನಗಳಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಸಂಘಟಿತ ವಾಗಿ ಕೆಲಸ ಮಾಡುವುದು ಹೇಗೆ ? ಇದೊಂದು ರಾಜಕೀಯ ಜಾಣ ಪ್ರಶ್ನೆ ಬಿಜೆಪಿಗೊಂದು ಸವಾಲು. ಯಾವುದೇ ಚುನಾವಣೆ ಆಗಲಿ. ಒಂದು ಚುನಾವಣೆಯಲ್ಲಿ ಎದುರಾಳಿ ಆದ ಪಕ್ಷವನ್ನು ಮತ್ತೊಂದು ಚುನಾವಣೆಯಲ್ಲಿ ರಾಜಕೀಯವಾಗಿ ಅಪ್ಪಿಕೊಳ್ಳುವ ನಡೆ ಜನತೆಗೆ ಎಷ್ಟರ ಮಟ್ಟಿಗೆ ಒಪ್ಪಿತವಾಗುವುದೋ . ಕಾದುನೋಡಬೇಕು. ಜಿಲ್ಲೆ ಮತ್ತು ತಾಲೂಕು ಪಂಚಾಯ್ತಿ ಮತ್ತು ಪುರಸಭೆ ಮತ್ತು ನಗರಸಭೆ ಮತ್ತು ನಗರಪಾಲಿಕೆಗಳ ಚುನಾವಣೆಗಳಲ್ಲಿ ಜೆಡಿಎಸ್ , ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಸೀಟುಗಳನ್ನು ಗಳಿಸಿದಾಗ, ಬಿಜೆಪಿ ಮತ್ತು ದಳದ ಮೈತ್ರಿಗೆ ತೆರೆ ಬೀಳುವ ಸಾಧ್ಯತೆಯೂ ಇದೆ. ಅದೇನೆ ಇರಲಿ. ರಾಜ್ಯದಲ್ಲಿ ಒಂದು ಪ್ರಮುಖ ಪ್ರಾದೇಶಿಕ ಪಕ್ಷವಾಗಿ ತನ್ನ ರಾಜಕೀಯ ಅಸ್ತಿತ್ವವನ್ನು ತೋರಿರುವ ಜೆಡಿಎಸ್, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜನಮಾನಸದಲ್ಲಿ ತಮ್ಮ ಪಕ್ಷದ ಮೆಲಿರುವ ವಿಶ್ವಾಸ ಮತ್ತು ನಂಬಿಕೆ ಕುಗ್ಗಿದೆಯೇ, ಹಿಗ್ಗಿದೆಯೇ ಎಂಬುದಕ್ಕೆ ಮಾಜಿ ಪ್ರಧಾನಿ ಈಗ ಕೈಗೊಂಡ ನಿರ್ಣಯವೊಂದು ಅಗ್ನಿಪರೀಕ್ಷೆಯೇ ಸರಿ.
ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಪ್ರಾದೇಶಿಕ ಪಕ್ಷಗಳ ಜನಪ್ರಿಯತೆಯೇನೂ ಕಳೆಗುಂದಿಲ್ಲ. ತೆಲಂಗಾಣದಲ್ಲಿ ಮೊನ್ನೆ ನಡೆದ ಪಂಚಾಯ್ತಿ ಚುನಾವಣೆಗಳಲ್ಲಿ ಬಿಆರ್‌ಎಸ್ (ಕೆ ಸಿ ಚಂದ್ರಶೇಖರ ರಾವ್ ಪಕ್ಷ) ಎರಡನೆ ಸ್ಥಾನವನ್ನು ಪಡೆದಿರುವುದು ಗಮನಾರ್ಹ. ಇಲ್ಲಿ ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಅದೆಷ್ಟೇ ಅಬ್ಬರಿಸಿ ರಣತಂತ್ರ ರೂಪಿಸಿದರೂ ಗ್ರಾಮೀಣ ಮಟ್ಟದಲ್ಲಿ ಈ ಸಂಗತಿಗಳು ಮತ ಗಳಾಗಿ ಪರಿವರ್ತನೆಯಾಗುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ. ಮಹಾರಾಷ್ಟ್ರದಲ್ಲಿ ಠಾಕ್ರೆ ಕುಟುಂಬ ರಾಜಕೀಯವಾಗಿ ಒಂದಾಗಿರುವ ಹಿಂದೆ ಹಲವು ಹತ್ತು ಸಮೀಕರಣಗಳಿವೆ. ರಾಜ್ ಠಾಕ್ರೆ ಮತ್ತು ಉದ್ದವ್ ಠಾಕ್ರೆ ಮೈತ್ರಿಯಿಂದ ಬಿಜೆಪಿ ಮಿತ್ರಕೂಟದ ಮೇಲೆ ಗಮನಾರ್ಹ ಪರಿಣಾಮ ಬೀರುವುದಂತೂ ನಿಜ. ದೇಶದಲ್ಲಿಂದು ಮೈತ್ರಿ ರಾಜಕಾರಣ ಅನಿವಾರ್ಯ. ಆದರೆ ಇದನ್ನು ಯಾವ್ಯಾವ ಸಮಯದಲ್ಲಿ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಬೇಕೆಂಬ ಚುನಾವಣಾ ರಣನೀತಿಗಳಿಗೆ ದೇವೇಗೌಡ, ನಿತೀಶ್‌ಕುಮಾರ್ ಶರತ್ ಪವಾರ್ ಮತ್ತು ಚಂದ್ರಬಾಬು ನಾಯಡು ಅವರೇ ಸಾಟಿ ! ರಾಜ್ಯದ ಅಸೆಂಬ್ಲಿ ಚುನಾವಣೆಗಳಲ್ಲಿ ಬಿಜೆಪಿ ತನ್ನ ಸ್ವಂತ ಬಲದ ಮೇಲೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬಿ ವೈ ವಿಜಯೇಂದ್ರ ಹೇಳಿಕೆ ನೀಡಿರುವ ಬೆನ್ನ ಹಿಂದೆಯೇ ದೇವೇಗೌಡರು ಸ್ಥಳೀಯ ಸಂಸ್ಥೆಗಳ ಎಲೆಕ್ಷನ್‌ಗೆ ದೋಸ್ತಿ ಇಲ್ಲ ಎಂದಿರುವುದು ಮೈತ್ರಿ ರಾಜಕಾರಣದ ಮಹಾ ಸ್ಥಿತ್ಯಂತರಗಳ ದ್ಯೋತಕ ಎಂದರೆ ತಪ್ಪಲ್ಲ.


