ನೋಡು ನೋಡುತ್ತಿದ್ದಂತೆ
ನೋವು ಸಖನಾಗಿಬಿಟ್ಟಿದೆ
ಸುಖವು ಬಂದರೂ
ಅಪ್ಪಿಕೊಳ್ಳದಂತೆ…
ಬದುಕಿಡೀ ದುಃಖದ ಸಾಂಗತ್ಯದಲ್ಲಿಯೇ ಇದ್ದ ಜೀವಕ್ಕೆ ಯಾತನೆಯೇ ಆಪ್ತಸಖನೆನಿಸುತ್ತದೆ. ಸುಖ ಬಳಿ ಬಂದು ನಿಂತರೂ ನಗುತ್ತಲೇ ಅದನ್ನು ತಿರಸ್ಕರಿಸುವಷ್ಟು ನೋವಿಗೆ ಶರಣಾದ ಜೀವದ ಹೃದಯದ ಸಾಲುಗಳಿವು. ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲ್ಲೂಕು ಆವಲಹಳ್ಳಿಯವರಾದ ಲೋಕೇಶ್ ಮನ್ವಿತ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು. ಚಿತ್ರಕಲೆ, ಕವಿತೆ ರಚನೆ ಇವರ ಇಷ್ಟದ ಹವ್ಯಾಸ. ಕವಿವಾಣಿ ಮಾಸಪತ್ರಿಕೆ, ಅವಧಿ ಬ್ಲಾಗ್‌ನಲ್ಲಿ ಇವರ ಕವಿತೆಗಳು ಪ್ರಕಟವಾಗಿವೆ. ಕನ್ನಡಿಗರ ಸ್ನೇಹಕೂಟ, ಕನ್ನಡ ಕವಿವಾಣಿ ಮಾಸಪತ್ರಿಕೆ, ಕನ್ನಡ ಸಾಹಿತ್ಯ ಬಳಗ, ಜಿಲ್ಲಾ ಯುವ ಬರಹಗಾರರ ಬಳಗ ಏರ್ಪಡಿಸಿದ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ‘ತೀರವಿನ್ನು ಭರ್ತಿಯಾಗಿಲ್ಲ’ ಎಂಬ ಮೊದಲ ಕವನ ಸಂಕಲನ ಪ್ರಕಟಗೊಂಡಿದೆ. ಕಾವ್ಯದೀಪ್ತಿ, ವಿಶ್ವ ಮಾನವ, ಯೋಗಿ ಸೇವಾ ರತ್ನ ಪ್ರಶಸ್ತಿಗಳು ಇವರಿಗೆ ಸಂದಿವೆ.
ಪ್ರೀತಿಸಿದಷ್ಟು ಬದುಕುತ್ತೇನೆ
ನಿನ್ನನ್ನು
ಪ್ರೀತಿಸಿದಷ್ಟು
ಬದುಕುತ್ತೇನೆ
ಮತ್ತೇ ಮತ್ತೇ
ಉಸಿರು ನೀಡಿ
ಬದುಕಿಸುವ
ನಿನ್ನ ಮಾತುಗಳಿಗೆ
ಕಾಯುತ್ತೇನೆ
ಇದ್ದಕ್ಕಿದ್ದಂತೆ
ಮನದ ಸ್ಥಿತಿಗತಿಯನ್ನು
ಬದಲಾಯಿಸುವ
ನಿನ್ನದೊಂದು
ದಾರಿಯನ್ನು ಕಾಯುತ್ತೇನೆ
ದಾರಿಯುದ್ದಕ್ಕೂ
ಓಡುತ್ತೇನೆ
ಕಾಲಿಗೆ ಸಿಕ್ಕ ಚೂರು ಕಲ್ಲು
ಬೀಳಿಸಿ ರಕುತ ಬರಿಸಿದಾಗ
ನಿನ್ನ ಆರೈಕೆಗೆ ಅರಸುತ್ತೇನೆ
ಆಯಾಸಗೊಂಡು
ಕುಳಿತ ಮರದ
ನೆಳಲ ಬಳಿ ಬೀಸುವ
ಗಾಳಿಯು ನೀನೇ
ಆಗಿರಬೇಕೆಂದು
ತಲೆ ಎತ್ತಿ ಬೇಡುತ್ತೇನೆ
ನೆಲದಲ್ಲಿ ಹರಡಿ ಬೆಳೆದ
ಚಿಕ್ಕ ಚಿಕ್ಕ ಗಿಡಗಳ
ಹೂವಿನ ಪಕಳೆಗಳಲ್ಲಿ
ನಿನ್ನ ಹೆಸರು ಬರೆಯ
ಬಯಸುತ್ತೇನೆ
ಮುಡಿಯಲ್ಲಿರಿಸಲು
ಬರುವಾಗ ಎದೆಯಲ್ಲಿ
ಮತ್ತಷ್ಟು ಮತ್ತಷ್ಟು
ನಿನ್ನ ಪ್ರೀತಿಸಿದಷ್ಟೇ ಮತ್ತೇ
ಮತ್ತೇ ಬದುಕುತ್ತೇನೆ
-ಲೋಕೇಶ್ ಮನ್ವಿತ್
ಪ್ರೀತಿ ಎಂಬ ಎರಡಕ್ಷರ ಬದುಕಿನಲ್ಲಿ ಮಾಡುವ ಮೋಡಿಯೇ ಅಂತಹದ್ದು; ಅದು ಜೀವನವನ್ನು ಇನ್ನಿಲ್ಲದಂತೆ ಮೋಹಿಸುವುದನ್ನು ಹೇಳಿಕೊಡುತ್ತದೆ. ಬೊಗಸೆ ಕಂಗಳ ತುಂಬ ಹೊಂಬಣ್ಣದ ಕನಸುಗಳನ್ನು ತುಂಬಿಕೊಂಡು ನಿರೀಕ್ಷೆಯಿಟ್ಟು ಕಾಯುವಂತೆ ಮಾಡುತ್ತದೆ. ಬೆಟ್ಟದಂಥ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಬಲ ಕೊಟ್ಟು ಗೆಲುವಿಗೆ ಹತ್ತಿರವಾಗಿಸುತ್ತದೆ. ಸೋತ ಕಂಗಳಿಗೆ ಸಾಂತ್ವನ ತುಂಬಿ ಮುನ್ನುಗ್ಗುವ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಅದಕ್ಕೆ ಅಲ್ಲವೆ ಕವಿ ‘ಪ್ರೀತಿಯಿಲ್ಲದೆ ನಾನು ಏನನ್ನು ಮಾಡಲಾರೆ, ದ್ವೇಷವನ್ನೂ ಕೂಡ’ ಎಂದಿದ್ದು. ಕವಿ ಲೋಕೇಶ್ ಮನ್ವಿತ್ ಅವರ ಕವಿತೆ ಕೂಡ ಪ್ರೀತಿಯಿದ್ದರೆ ಮಾತ್ರ ಬದುಕು ಎನ್ನುತ್ತದೆ. ಬದುಕುವ ಭರವಸೆ ತುಂಬುವ ಪ್ರೀತಿಯ ಮಾತುಗಳಿಗಾಗಿ ಕಣ್ಣಿಟ್ಟು ಕಾಯುತ್ತದೆ, ಬಾಳಿನ ದಿಕ್ಕನ್ನೇ ಬದಲಾಯಿಸುವ ಪ್ರೀತಿಯ ದಾರಿಯನ್ನೇ ಇದಿರು ನೋಡುತ್ತದೆ, ನೋವಾದಾಗ ಅದರ ಸಂತೈಕೆಗೆ, ನೇವರಿಕೆಗೆ ಪರಿತಪಿಸುತ್ತದೆ. ಏಕೆಂದರೆ ಪ್ರೀತಿಯೊಂದೇ ಬದುಕಿನ ಚಾಲನೆಗೆ ಇಂಧನ.
ದ್ವೇಷವನ್ನು ಕಾಪಿಟ್ಟುಕೊಂಡು ಬಂದರೆ ಆಯಸ್ಸು ಕಮ್ಮಿಯಾಗುತ್ತಾ ಹೋಗುತ್ತದೆ. ಅದೇ ಪ್ರೀತಿಗೆ ಎದೆಯಲಿ ತಾವು ಕೊಟ್ಟರೆ ಉಸಿರಿಗೆ ದೀರ್ಘಾಯುಷ್ಯ. ಪ್ರೀತಿಸಿದ ಜೀವವೊಂದು ಮತ್ತೆ ಮತ್ತೆ ತನ್ನಿಷ್ಟದ ಜೀವದ ಸಾಂಗತ್ಯಕ್ಕೆ ಹಂಬಲಿಸುವ, ಬೊಗಸೆಯೊಡ್ಡಿ ಬೇಡಿಕೊಳ್ಳುವ ‘ನಿನ್ನನ್ನು ಪ್ರೀತಿಸಿದಷ್ಟು, ನನ್ನ ಉಸಿರಿನ ಆಯಸ್ಸು ಜಾಸ್ತಿಯಾಗುತ್ತೆ’ ಎನ್ನುವ ಕವಿತೆಯಲ್ಲಿನ ಸಾಲುಗಳು ಕಾಡುತ್ತವೆ. ಅವಳ ಕಳೆದುಹೋದ ಮಾತುಗಳನ್ನು ಕೇಳಲು ಕಾತರಿಸುತ್ತದೆ. ಮನದ ಖಿನ್ನತೆಯನ್ನು ಇದ್ದಕ್ಕಿದ್ದಂತೆ ಇಲ್ಲವಾಗಿಸುವ ಅವಳ ಹಾಜರಿಗಾಗಿ ಎದುರು ನೋಡುತ್ತದೆ. ನೋವಾದಾಗ, ಕಣ್ಣಂಚುಗಳು ಒದ್ದೆಯಾದಾಗ ಅವಳ ಒಂದು ಮೃದು ಸ್ಪರ್ಶಕ್ಕೆ, ಸಾಂತ್ವನದ ನುಡಿಗಳಿಗೆ ಹುಡುಕುತ್ತದೆ. ಆಯಾಸಗೊಂಡು ಕುಳಿತಾಗ ಮೈ ಸೋಕುವ ಗಾಳಿಯು ನೀನಾಗಿರಬಾರದೆ ಎಂದು ಬೇಡಿಕೊಳ್ಳುತ್ತದೆ. ಎಲ್ಲ ಕಡೆಗಳಲ್ಲೂ ಅವಳ ಇರುವಿಕೆಯನ್ನೇ ಬಯಸುವ ಜೀವ, ಜಗತ್ತಿನ ಸರ್ವಖುಷಿಗಳನ್ನು ಅವಳಲ್ಲಿಯೇ ಕಾಣಬಯಸುತ್ತದೆ. ಅಲ್ಲದೆ ಮತ್ತೆ ಮತ್ತೆ ಅವಳನ್ನೇ ಧೇನಿಸುತ್ತಾ, ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತದೆ. ಏಕೆಂದರೆ ಗೊತ್ತು ಆ ಜೀವಕ್ಕೆ, ಅವಳನ್ನು ಪ್ರೀತಿಸಿದಷ್ಟು ಬದುಕುತ್ತೇನೆಂದು.
ಪ್ರೀತಿಯನ್ನೇ ಬದುಕಾಗಿಸಿಕೊಂಡಿರುವ, ಅದರಲ್ಲಿಯೇ ಕಳೆದು ಹೋಗಿರುವ ಜೀವವೊಂದು ಒಲವಿಗಾಗಿ ಪರಿತಪಿಸುವ ರೀತಿ ಕವಿತೆಯುದ್ದಕ್ಕೂ ಅನಾವರಣಗೊಂಡಿದೆ. ಕವಿತೆ ಬರೆದ ಕವಿಗೆ ನಮನಗಳು.
-ನಾಗೇಶ ನಾಯಕ, ವಿಮರ್ಶಕರು