ರಾಜ್ಯದಲ್ಲಿ ಕೊರೋನ ಸೋಂಕು ಪ್ರಕರಣ ಏರಿಕೆ ಕಾಣುತ್ತಿದ್ದು, ಬೆಂಗಳೂರಿನ ಗಾಂಧಿನಗರದ ಒಬ್ಬರಲ್ಲಿ ಪತ್ತೆಯಾಗಿದೆ. ಗಾಂಧಿನಗರದ 46 ವರ್ಷದ ವ್ಯಕ್ತಿಯಲ್ಲಿ ಕೊರೋನ ಪಾಸಿಟಿವ್ ಕಾಣಿಸಿಕೊಂಡಿದ್ದು, ಅವರು ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ ಎಂಬುದು ಗಮನಾರ್ಹ.
ಸೋಂಕಿತ ವ್ಯಕ್ತಿಯನ್ನು ಹೋಂ ಐಸೋಲೇಷನ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಕೊರೋನ ಟೆಸ್ಟಿಂಗ್ ಆರಂಭಿಸಲಾಗಿದ್ದು, ಪಾಸಿಟಿವ್ ದರ ಜಾಸ್ತಿಯಾಗುತ್ತಿದೆ. ಸೋಮವಾರ 191 ಜನರಿಗೆ ಟೆಸ್ಟ್ ಮಾಡಲಾಗಿದ್ದು, 37 ಜನರಿಗೆ ಪಾಸಿಟಿವ್ ಕಂಡು ಬಂದಿದೆ. 171 ಜನರಿಗೆ RT-PCR ಟೆಸ್ಟ್ ಮಾಡಲಾಗಿದೆ.
ಮೇ 25ರಂದು ನಡೆಸಿದ ಟೆಸ್ಟ್‌ನಲ್ಲಿ ಪಾಸಿಟಿವ್ ದರ 8.65% ಇತ್ತು. 26ರಂದು 19.37%ಗೆ ಏರಿಕೆ ಆಗಿದೆ. ಸೋಮವಾರ ಸರ್ಕಾರ ನಡೆಸಿದ ಸಭೆಯಲ್ಲಿ ಕೋವಿಡ್ ಕುರಿತು ಯಾವುದೇ ಆತುರದ ನಿರ್ಧಾರ ಕೈಗೊಳ್ಳುವುದು ಬೇಡ, ಯಾವುದೇ ಪರಿಸ್ಥಿತಿ ಬಂದರೂ ಎದುರಿಸಲು ಸರ್ವ ಸಿದ್ಧತೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ನಗರದ ಮಾಲ್‌ಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸುವ ಕುರಿತು ಇಂದು ತೀರ್ಮಾನಿಸುವ ಸಾಧ್ಯತೆಯಿದೆ.
ಬೆಂಗಳೂರು 73, ಬೆಂಗಳೂರು ಗ್ರಾಮಾಂತರ 2, ಮೈಸೂರು 3, ವಿಜಯನಗರ ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ ಒಂದೊಂದು ಕೋವಿಡ್ ಸಕ್ರಿಯ ಪ್ರಕರಣಗಳು ಸೋಮವಾರ ವರದಿಯಾಗಿವೆ. ಸದ್ಯ ರಾಜ್ಯದಲ್ಲಿ ಒಟ್ಟು 80 ಕೋವಿಡ್ ಸಕ್ರಿಯ ಪ್ರಕರಣಗಳು ವರದಿಯಾಗಿದ್ದು, 73 ಪ್ರಕರಣಗಳು ಬೆಂಗಳೂರಲ್ಲಿ ದೃಢಪಟ್ಟಿವೆ. ಕಳೆದ 24ಗಂಟೆಗಳಲ್ಲಿ ರಾಜ್ಯದಲ್ಲಿ ಒಟ್ಟು 191 ಟೆಸ್ಟ್ ಮಾಡಲಾಗಿದ್ದು, 37 ಜನರಲ್ಲಿ ಪತ್ತೆಯಾಗಿದೆ. 80 ಜನರಲ್ಲಿ 76 ಜನರನ್ನು ಹೋಮ್ ಐಸೋಲೇಷನ್ ಮಾಡಿದ್ದು, ಉಳಿದ ನಾಲ್ವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿರಿ ನೀಡಿದೆ.