ಮದ್ದೂರು ತಾಲೂಕಿನ ಲಕ್ಷ್ಮೇಗೌಡನದೊಡ್ಡಿ ಗ್ರಾಮದಲ್ಲಿ ಜಮೀನಿನಲ್ಲಿ ಫೆಬ್ರವರಿ 11 ರಂದು ರೈತ ಕೃಷ್ಣೇಗೌಡ (45) ಎಂಬ ಹತ್ಯೆ ನಡೆದಿತ್ತು, ತನಿಖೆ ಆರಂಭಿಸಿದ ಪೊಲೀಸರು ಆಸ್ತಿಗಾಗಿ ಮೃತ ಕೃಷ್ಣೇಗೌಡನ ಸಹೋದರನೇ ಸುಪಾರಿ ನೀಡಿ ಹತ್ಯೆ ಮಾಡಿಸಿರುವುದಾಗಿ ಖಚಿತಪಡಿಸಿದ್ದಾರೆ.
ಮನೆಯಿಂದ ಜಮೀನನ ಬಳಿ ಎಮ್ಮೆಗಳನ್ನು ಕಟ್ಟಲು ಹೋಗಿದ್ದ ಕೃಷ್ಣೇಗೌಡರನ್ನು ಬೈಕ್ನಲ್ಲಿ ಬಂದಿದ್ದ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದರು. ಸ್ಥಳಕ್ಕೆ ಬಂದಿದ್ದ ಸ್ಥಳೀಯರ ಮೇಲೂ ಲಾಂಗ್ ಬೀಸಿದ್ದರು. ಕೆಎಂ ದೊಡ್ಡಿ ಠಾಣೆ ಪೊಲೀಸರು ಕೊಲೆ ಪ್ರಕರಣವನ್ನು ಭೇದಿಸಿ, ಮೃತ ಕೃಷ್ಣೇಗೌಡನ ಸಹೋದರ ಶಿವನಂಜೇ ಗೌಡನನ್ನು ಬಂಧಿಸಿದ್ದಾರೆ. ಕೊಲೆಗೆ ಐದು ಲಕ್ಷ ರೂಪಾಯಿ ಸುಪಾರಿ ಪಡೆದಿದ್ದ ಚಂದ್ರಶೇಖರ್, ಸುನೀಲ್, ಉಲ್ಲಾಸ್, ಪ್ರತಾಪ್, ಅಭಿಷೇಕ್, ಶ್ರೀನಿವಾಸ, ಕನಕ ಪುರ ಮೂಲದ ಹನುಮೇಗೌಡ ಸೇರಿ ಎಂಟು ಮಂದಿ ಆರೋಪಿಗಳು ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ಆಸ್ತಿ ವಿಚಾರವಾಗಿ ಸಹೋದರ ಶಿವನಂಜೇಗೌಡನೇ ಐದು ಲಕ್ಷ ರೂಪಾಯಿ ಸುಪಾರಿ ನೀಡಿ ಅಣ್ಣನನ್ನು ಹತ್ಯೆ ಮಾಡಿಸಿರುವುದು ಗೊತ್ತಾಗಿದೆ. ತನ್ನ ಮೇಲೆ ಅನು ಮಾನ ಬರಬಾರದು ಎಂದು ಕೊಲೆಯಾಗುವ ಹಿಂದಿನ ದಿನವೇ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳಿದ್ದ ಎಂದು ಮಂಡ್ಯ ಎಸ್ಪಿ ಮಲ್ಲಿ ಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ.
ವ್ಯವಸಾಯ, ಹೈನುಗಾರಿಕೆ ಜೊತೆಗೆ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದ ಕೃಷ್ಣೇಗೌಡ, ಇತ್ತೀಚೆಗೆ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಸಾಲದ ಹಣವನ್ನು ಸಹೋದರ ಶಿವನಂಜೇಗೌಡ ತೀರಿಸಿ ಜಮೀನನ್ನು ತನ್ನ ಹೆಂಡತಿ ಹೆಸರಿಗೆ ಬರೆಸಿಕೊಂಡಿದ್ದ. ಜಮೀನು ಬರೆದುಕೊಟ್ಟರೂ ಕೃಷ್ಣೇಗೌಡ ಸಹೋದರ ಶಿವನಂಜೇ ಗೌಡನಿಗೆ ಜಮೀನು ಬಿಟ್ಟುಕೊಟ್ಟಿರಲಿಲ್ಲ. ಸಹೋದರಿಯರನ್ನೇ ಎತ್ತಿಕಟ್ಟಿ ಜಮೀನನ ವಿಚಾರದಲ್ಲಿ ಕೇಸ್ ಹಾಕಿಸಿದ್ದ. ಈ ವಿಚಾರವಾಗಿ ಕೃಷ್ಣೇಗೌಡನ ಮೇಲೆ ಶಿವ ನಂಜೇಗೌಡನಿಗೆ ಕೋಪವಿತ್ತು. ಮದನಹಟ್ಟಿಯಮ್ಮ ದೇವಸ್ಥಾನಕ್ಕೆ ಬರುತ್ತಿದ್ದ ಚಂದ್ರಶೇಖರ್ ಎಂಬಾತನಿಗೆ ಎರಡು ತಿಂಗಳ ಹಿಂದೆ ಐದು ಲಕ್ಷ ರೂಪಾಯಿ ಸುಪಾರಿ ನೀಡಿ ಹತ್ಯೆ ಮಾಡಿಸಿದ್ದಾನೆ.