Tuesday, November 04, 2025
Menu

ನಿಷ್ಠಾವಂತ ರಾಜಕಾರಣಿ ಮೇಟಿಯವರು ನನಗೆ ಅತ್ಯಂತ ಆಪ್ತ: ಸಿದ್ದರಾಮಯ್ಯ

ನಿಷ್ಠಾವಂತ ರಾಜಕಾರಣಿಯಾಗಿದ್ದ ಮೇಟಿಯವರು ನನಗೆ ಅತ್ಯಂತ ಆಪ್ತರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದಾರೆ.  ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಸಿಎಂ ಮಾತನಾಡಿದರು.

ಮಾಜಿ ಸಚಿವರು, ಹಿರಿಯ ನಾಯಕರು ಹಾಗೂ ಹಾಲಿ ಶಾಸಕರೂ ಆಗಿದ್ದ ಹೆಚ್.ವೈ.ಮೇಟಿಯವರು ನಿಧನರಾಗಿದ್ದಾರೆ. ನಾನು ಮೂರುದಿನಗಳ ಹಿಂದೆ ಅವರನ್ನು ಭೇಟಿ ಮಾಡಿ ಅವರ ಆರೋಗ್ಯವನ್ನು ವಿಚಾರಿಸಿದ್ದು, ವೈದ್ಯರೂ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ತಿಳಿಸಿದ್ದರು. ಆದರೆ ಮೇಟಿಯವರು ಇಷ್ಟುಬೇಗ ಇಹಲೋಕ ತ್ಯಜಿಸುತ್ತಾರೆಂದು ಭಾವಿಸಿರಲಿಲ್ಲ ಎಂದರು.

ಅತ್ಯಂತ ನಿಷ್ಠಾವಂತ ರಾಜಕಾರಣಿಯಾಗಿದ್ದು, ನನಗೆ ಅತ್ಯಂತ ಆಪ್ತರಾಗಿದ್ದರು. ಮೇಟಿಯವರು ಅರಣ್ಯ ಸಚಿವರಾಗಿ, ಸಂಸದರಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ಮೂಲತ: ಕೃಷಿಕರಾಗಿದ್ದ ಮೇಟಿಯವರು ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದರು. 1989 ರಲ್ಲಿ ಗುಳೇದಗುಡ್ಡ ಕ್ಷೇತ್ರದಿಂದ ಶಾಸಕರಾಗಿ ಸ್ಪರ್ಧಿಸಿ ಮೂರು ಬಾರಿ ಶಾಸಕರಾಗಿದ್ದರು. ಜನಪರ ಕಾಳಜಿಯಿಂದ ಸೇವೆ ಸಲ್ಲಿಸುತ್ತಿದ್ದ ಮೇಟಿಯವರು ಮಂತ್ರಿಯಾಗಿರಲಿ, ಸಂಸದರಾಗಿ, ಶಾಸಕರಾಗಿರಲಿ, ಪಕ್ಷಕ್ಕೆ ನಿಷ್ಠೆಯಿಂದ ದುಡಿಯುವಂತಹ ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂದು ಸ್ಮರಿಸಿದರು.

ಜನರೊಂದಿಗೆ ಒಡನಾಟ ಹಾಗೂ ಜನಪ್ರಿಯತೆಯಿಂದ ಬಾಗಲಕೋಟೆ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಅಂತಹ ನಿಷ್ಠಾವಂತ ನಾಯಕನೊಬ್ಬನ ಸಾವು ದು:ಖ ತಂದಿದ್ದು, ಇದು ನನಗೆ ವೈಯಕ್ತಿಕ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ, ಅವರ ಸಾವಿನ ದು:ಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ , ಅಭಿಮಾನಗಳಿಗೂ ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಇಂದು ಸಂಜೆಯ ತನಕ ಬೆಂಗಳೂರಿನ ಕುಟುಂಬದವರ ಮನೆಯಲ್ಲಿ ಪಾರ್ಥಿವ ಶರೀರವನ್ನು ಇರಿಸಿ, ನಂತರ ಬಾಗಲಕೋಟೆಗೆ ತೆರಳಲಾಗುವುದು. ನಾಳೆ ಎರಡು ಗಂಟೆಯ ಸುಮಾರಿಗೆ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯುವ ಅಂತ್ಯಕ್ರಿಯೆಯಲ್ಲಿ ತಾವೂ ಪಾಲ್ಗೊಳ್ಳುವುದಾಗಿ ಮುಖ್ಯಮಂತ್ರಿಗಳು ಹೇಳಿದರು.

Related Posts

Leave a Reply

Your email address will not be published. Required fields are marked *