Menu

ಒಂದು ಚಿಕ್ಕ “ಥ್ಯಾಂಕ್ಸ್” ಕೆಲಸದ ಆಯಾಸ ಕಡಿಮೆ ಮಾಡುತ್ತದೆ

ಮನೆಯ ಮುಂದಿನ ಮೋರಿ ಕಟ್ಟಿಕೊಂಡು ವಾರವಾದರೂ ಕ್ಲೀನ್ ಮಾಡದ ಪುರಸಭೆಯ ಅಧಿಕಾರಿಗಳ ಮೇಲೆ ಹರಿಹಾಯ್ದರು ಅಡ್ವೊಕೇಟ್ ಸದಾಶಿವರಾಯರು. ಇಲ್ಲ ಸರ್, ಇವತ್ತು ಎಷ್ಟೊತ್ತಿದ್ದರೂ ವರ್ಕರ್ಸ್‌ ಕಳಿಸಿಕೊಡ್ತೇನೆ ಸರ್. ಕೆಲಸಗಾರರು ಕಡಿಮೆ ಇದ್ದಾರೆ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ ಸರ್, ಪ್ಲೀಸ್… ಎಂದು ಅಲವತ್ತುಕೊಂಡ ಪುರಸಭೆಯ ಅಧಿಕಾರಿ. ಇಬ್ಬರು ಕೆಲಸಗಾರರು ಅಂದು ಅರ್ಧದಿನ ಇಡಿಯಾಗಿ ವಕೀಲ ಸಾಹೇಬರ ಮನೆಯ ಎದುರಿಗಿನ ಕಟ್ಟಿಕೊಂಡ ಮೋರಿ ಸ್ವಚ್ಛಗೊಳಿಸಿದರು. ಎಲ್ಲ ಕೆಲಸವಾದ ಬಳಿಕ ಸಾಹೇಬ್ರೆ ಕೆಲಸ ಮುಗೀತು, ಎಲ್ಲ ಕ್ಲೀನ್ ಮಾಡಿದೀವಿ. ನಾವು ಹೋಗ್ಬರ್‍ತೀವಿ ಸರ್ ಎಂದು ಹೇಳಿ ಹೊರಡಲು ಸಿದ್ಧವಾದರು. ವಕೀಲರು ಕೋಪದಿಂದ ಇನ್ಮೇಲೆ ವಾರ ವಾರ ಬಂದು ಮೋರಿ ಸ್ವಚ್ಛಗೊಳಿಸಿ. ಇಲ್ಲದಿದ್ದರೆ ನಿಮ್ಮ ಮೇಲಿನ ಸಾಹೇಬರ ಹತ್ತಿರ ಹೇಳಬೇಕಾಗುತ್ತೆ. ಯಾಕೋ ಬರ್‍ತಾ ಬರ್‍ತಾ ನಿಮಗೂ ಕೊಬ್ಬು ಜಾಸ್ತಿ ಆಯ್ತು ಅಂತ ರೇಗಾಡಿದರು. ಕೆಲಸಗಾರರು ಬೈಸಿಕೊಂಡು ಸಪ್ಪೆ ಮೋರೆ ಹಾಕಿಕೊಂಡು ಹೋದರು. ಅರ್ಧ ದಿನಪೂರ್ತಿ ಕೆಲಸ ಮಾಡಿದ ಕೆಲಸಗಾರರಿಗೆ ಒಂದು ಥ್ಯಾಂಕ್ಸ್ ಹೇಳಿದ್ರೆ ಅವರೆಷ್ಟೊಂದು ಖುಷಿಯಿಂದ ನಗುನಗುತ್ತ ಹೋಗುತ್ತಿದ್ದರು? ಯಾಕೆ ಈ ರೀತಿ ಮನುಷ್ಯ ಕೃತಘ್ನನಾಗುತ್ತಿದ್ದಾನೆ? ಅಧಿಕಾರ, ಹಣ, ಅಂತಸ್ತು, ಪ್ರಭಾವಗಳು ಅವನ ಒಳಮನಸ್ಸಿನ ಭಾವನೆಗಳನ್ನು ಅಮುಕಿ ಹಾಕಿವೆಯೆ? ದುಡ್ಡು, ಅಧಿಕಾರವೊಂದಿದ್ದರೆ ಸಾಕು ಎಲ್ಲರನ್ನೂ, ಎಲ್ಲವನ್ನೂ ಪಡೆಯಬಹುದು ಎನ್ನುವ ಅಹಮ್ಮು ಅವನನ್ನು ಆವರಿಸಿದೆಯೋ? ಗೊತ್ತಿಲ್ಲ.

ನೀವು ಗಮನಿಸಿ. ಥ್ಯಾಂಕ್ಸ್ ಮತ್ತು ಸಾರಿ ಎನ್ನುವ ಎರಡು ಪದಗಳು ನಮ್ಮನ್ನೆಷ್ಟು ದೊಡ್ಡವರನ್ನಾಗಿಸುತ್ತವೆ. ನೀವು ಅವಸರದಲ್ಲಿ ಎಲ್ಲಿಗೋ ಹೊರಟಿರುತ್ತೀರಿ. ತಕ್ಷಣ ಸಿಗ್ನಲ್ ಬೀಳುತ್ತದೆ. ನಿಮ್ಮ ಬೈಕ್ ಇನ್ನೇನು ನಿಲ್ಲಿಸುವಷ್ಟರಲ್ಲಿ ಅದು ಇನ್ನೊಬ್ಬನ ಬೈಕಿಗೆ ತಾಗಿರುತ್ತದೆ. ಅವನು ನಿಮ್ಮನ್ನು ಕೆಕ್ಕರಿಸಿಕೊಂಡು ನೋಡುತ್ತಿರುವಂತೆಯೇ ನೀವು ’ಸಾರಿ’ ಅವಸರದಲ್ಲಿದ್ದೆ ನೋಡಲಿಲ್ಲ ಅಂತ ಹೇಳಿಬಿಟ್ಟರೆ ಅವನು ನಕ್ಕು ಪರವಾಗಿಲ್ಲ ಬಿಡಿ ಎಂದು ಹೇಳಿ ಹೊರಟು ಹೋಗುತ್ತಾನೆ. ಆದರೆ ಮಾಡಿದ ತಪ್ಪನ್ನು ಸರಿ ಅಂತ ಸಮರ್ಥಿಸಿಕೊಳ್ಳಲು ತೊಡಗಿದರೆ ಜಗಳ ಗ್ಯಾರಂಟಿ.

ಒಂದು ಪ್ರತಿಷ್ಠಿತ ಹೋಟೇಲ್ಲಿಗೆ ನಿಮ್ಮ ಕುಟುಂಬ ಸಮೇತ ಹೋಗಿರುತ್ತೀರಿ. ಅಲ್ಲಿನ ಸಪ್ಲೈಯರ್ ನಿಮ್ಮನ್ನು ತುಂಬಾ ಕಾಳಜಿ ಮಾಡುತ್ತಾನೆ. ನಿಮ್ಮ ಎಲ್ಲ ಬೇಕುಗಳನ್ನು ಪೂರೈಸುತ್ತಾನೆ. ಕೊನೆಗೆ ಬಿಲ್ಲು ಕೊಟ್ಟು ನಿಮ್ಮೆದುರು ಕೈಕಟ್ಟಿ ನಿಲ್ಲುತ್ತಾನೆ. ನೀವು ಅವನಿಗೆ ದುಬಾರಿ ದುಡ್ಡನ್ನು ಟಿಪ್ಸ್ ಕೊಡಬೇಕೆಂದೇನಿಲ್ಲ. ತುಂಬಾ ಚೆನ್ನಾಗಿ ಸರ್ವ್‌ ಮಾಡ್ತೀಯಪ್ಪ. ಯಾವಾಗ ಸೇರ್‍ಕೊಂಡೆ ಕೆಲ್ಸಕ್ಕೆ? ನೆಕ್ಸ್ಟ್ ಬಂದಾಗ ನಿನ್ನ ಟೇಬಲ್ಲಿಗೆ ಬರ್‍ತೀನಿ ಅಂತ ಹೇಳಿ ಚಿಲ್ಲರೆ ಹತ್ತು ರೂಪಾಯಿ ಕೊಟ್ಟು ಬೆನ್ನು ಚಪ್ಪರಿಸಿ ನೋಡಿ, ಅವನ ಕಣ್ಣಲ್ಲಿ ನಿಮ್ಮ ಬಗ್ಗೆ ಕಣ್ಣೀರು ಕೃತಜ್ಞತೆ ರೂಪದಲ್ಲಿ ಜಿನುಗುತ್ತಿರುತ್ತದೆ. ನಾವು ಧಾವಂತದ ಈ ದುನಿಯಾದಲ್ಲಿ ಪ್ರಶಂಸೆ, ಮೆಚ್ಚುಗೆ, ಕ್ಷಮೆ ಎಂಬ ಪದಗಳಿಗೆ ಅವಕಾಶ ಕೊಡದ ರೀತಿಯಲ್ಲಿ ವರ್ತಿಸ್ತಾ ಇದ್ದೀವಿ.

ಅವನ ಕರ್ತವ್ಯ ಅವನು ಮಾಡಿದ ಅದರಲ್ಲಿ ನಾನು ಅವನನ್ನು ಹೊಗಳೊ ಅವಶ್ಯಕತೆ ಏನಿದೆ? ಹೀಗೆ ಎಲ್ಲರನ್ನು ಹೊಗಳೊಕೆ ನನಗೆ ಟೈಮೆಲ್ಲಿದೆ? ಇಷ್ಟಕ್ಕೂ ಅವನು ಮಾಡಿದ ಘನಂದಾರಿ ಕೆಲಸವಾದರೂ ಏನು ಎನ್ನುವ ಅಸಂಬದ್ಧ ಆಲೋಚನೆಗಳು ನಮ್ಮನ್ನು ಸಣ್ಣವರನ್ನಾಗಿಸುತ್ತಿವೆ. ನಾನು ಉನ್ನತ ಅಧಿಕಾರಿ, ಒಂದು ಸಣ್ಣ ಕೆಲಸದಲ್ಲಿರೋ ಅವನ ಕ್ಷಮೆ ಕೇಳೋದೇ? ನನ್ನ ಸ್ಥಾನ-ಮಾನ, ಘನತೆ-ಗೌರವಗಳು ಏನಾಗಬೇಡ? ಬೇಕಿದ್ದರೆ ಅವನೇ ಬಂದು ನನ್ನ ಕ್ಷಮೆ ಕೇಳಲಿ ಎನ್ನುವ ಸಂಕುಚಿತ ಮನಸ್ಥಿತಿ ನಮ್ಮನ್ನು ದುರಹಂಕಾರಿ ಮಾಡಿ ಮುಗುಳ್ನಗುತ್ತಿದೆ. ಯಾವ ಕೆಲಸವಾದರೂ ಅದು ತನ್ನ ವ್ಯಾಪ್ತಿಯಲ್ಲಿ ಗೌರವ, ಶ್ರೇಷ್ಠತೆಯನ್ನು ಪಡೆದಿರುತ್ತದೆ. ನನ್ನ ವೃತ್ತಿ ಅಷ್ಟೇ ಶ್ರೇಷ್ಠವಾದುದು ಅಂತ ತಿಳಿದುಕೊಂಡರೆ ಮೂರ್ಖತನವಾದೀತು. ಒಂದು ಮನೆ ನಿರ್ಮಾಣವಾಗಬೇಕಾದರೆ ಇಂಜಿನೀಯರ್, ಗಾರೆ ಕೆಲಸದವನು, ಮೇಸ್ತ್ರಿ, ಸೆಂಟ್ರಿಂಗ್‌ನವರು, ಪಂಬ್ಲರ್, ಪೇಂಟರ್ ಎಲ್ಲರೂ ಹೇಗೆ ಮುಖ್ಯವೋ ಹಾಗೆಯೇ ಬದುಕಿನಲ್ಲಿ ಒಂದೊಂದು ವೃತ್ತಿಗಾಗಿ ನಾವು ಎಲ್ಲರ ಮೇಲೆ ಅವಲಂಬನೆ ಮಾಡಬೇಕಾಗುತ್ತದೆ. ಕೆಲಸ ಮಾಡಿಕೊಂಡಾದ ಮೇಲೆ ದುಡ್ಡು ಕೊಟ್ಟೇ ಕೊಡ್ತೀವಿ. ಆದರೆ ಅದರ ಜೊತೆ ಒಂದು ಸಣ್ಣ ಥ್ಯಾಂಕ್ಸ್ ಹೇಳಿ ನೋಡಿ ಕೆಲಸ ಮಾಡಿದವನ ಭಾರವೆಲ್ಲ ಇಳಿದು ನಿಮ್ಮ ಬಗ್ಗೆ ಗೌರವ ಇಮ್ಮಡಿಯಾಗುತ್ತದೆ.

ನೀವು ಪ್ರತಿ ದಿನವೂ ಒಂದಲ್ಲ ಒಂದು ಕೆಲಸಕ್ಕೆ ಒಬ್ಬರನ್ನು ಅವಲಂಬಿಸಬೇಕಾತ್ತದೆ. ಬಟ್ಟೆ ಸ್ವಚ್ಛವಾಗಿ ತೊಳೆದು ಇಸ್ತ್ರಿ ಮಾಡಿಕೊಡುವ ಲಾಂಡ್ರಿಯವನನ್ನು, ಮನೆಗೆ ಗ್ಯಾಸ್ ತಂದುಕೊಡುವ ಡೆಲೆವರಿ ಮ್ಯಾನ್, ಬೆಳ್ಳಂಬೆಳಿಗ್ಗೆ ಹಾಲು ಹಾಕುವವನನ್ನು, ಪತ್ರಿಕೆ ಎಸೆದು ಹೋಗುವ ಹುಡುಗನನ್ನು, ರೇಶನ್ ತಂದಿಳಿಸುವ ಆಟೋ ಚಾಲಕನನ್ನು, ವಿದ್ಯುತ್ ಬಿಲ್ ಕೊಡುವ ಬಿಲ್ ಕಲೆಕ್ಟರ್‌ನನ್ನು, ಹೊಟೇಲಿನಲ್ಲಿ ಚಹಾ ತಂದಿಡುವ ಮಾಣಿಯನ್ನು ಹೀಗೆ ಒಂದಲ್ಲ ಒಂದು ಸಂದರ್ಭದಲ್ಲಿ ನಿಮಗೆ ಇವರು ಅಗತ್ಯ ಅನ್ನಿಸಿಬಿಡುತ್ತಾರೆ ಮತ್ತು ನಿಮ್ಮ ಕೆಲಸಗಳನ್ನು ಮಾಡಿಕೊಡುತ್ತಾರೆ. ಒಂದು ಸಲ, ಕೇವಲ ಒಂದೇ ಒಂದು ಸಲ ಇವರಿಗೆ ’ಥ್ಯಾಂಕ್ಸ್’ ಹೇಳಿ ನೋಡಿ ಇವರ ಮೊಗದಲ್ಲಿನ ಬದಲಾವಣೆಗಳನ್ನು ಗಮನಿಸಿ. ನಿಮ್ಮ ಬಗ್ಗೆ ಇರುವ ಅಭಿಮಾನ ಇನ್ನಷ್ಟು ಇಮ್ಮಡಿಯಾಗಿರುತ್ತದೆ. ಅದಕ್ಕೆ ನೀವು ಅವರಿಗೋಸ್ಕರ ಮಹತ್ಕಾರ್ಯಗಳನ್ನು ಮಾಡಬೇಕೆಂದಿಲ್ಲ. ಒಂದು ಚಿಕ್ಕ ’ಥ್ಯಾಂಕ್ಸ್’ ಹೇಳ್ತಿರಲ್ಲ?

-ನಾಗೇಶ್ ಜೆ. ನಾಯಕ. ಶಿಕ್ಷಕರು, ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆ

ಉಡಿಕೇರಿ-೫೯೧೧೦೪ ಬೈಲಹೊಂಗಲ, ಬೆಳಗಾವಿ ಜಿಲ್ಲೆ.

Related Posts

Leave a Reply

Your email address will not be published. Required fields are marked *