ಪೊಂಗಲ್ ಹಬ್ಬಕ್ಕೆ ತಮಿಳುನಾಡಿನ 2.22 ಕೋಟಿ ಪಡಿತರ ಚೀಟಿದಾರರಿಗೆ ಮತ್ತು ಶ್ರೀಲಂಕಾದ ತಮಿಳರ ಪುನರ್ವಸತಿ ಶಿಬಿರಗಳಲ್ಲಿ ವಾಸಿಸುತ್ತಿರುವ ಎಲ್ಲಾ ಕುಟುಂಬಗಳಿಗೆ ಸರ್ಕಾರವು ತಲಾ ಮೂರು ಸಾವಿರ ರೂ., ಕಬ್ಬು, ಒಂದು ಕೆ.ಜಿ ಅಕ್ಕಿ, ತುಪ್ಪ ಹಾಗೂ ಸಕ್ಕರೆ ಒಳಗೊಂಡಿರುವ ಪೊಂಗಲ್ ಗಿಫ್ಟ್ ಹ್ಯಾಂಪರ್ ನೀಡಲಿದೆ ಎಂದು ಅಲ್ಲಿನ ಡಿಎಂಕೆ ನೇತೃತ್ವದ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದ್ದಾರೆ.
ತಮಿಳುನಾಡಿನ ಪ್ರಮುಖ ಹಬ್ಬವಾಗಿರುವ ʻಪೊಂಗಲ್ʼ ಮೂರು ದಿನ ಆಚರಿಸಲಾಗುತ್ತದೆ. ಜನವರಿ 15 ರಂದು ಹಬ್ಬದ ದಿನ ಎರಡು ಕೋಟಿಗೂ ಅಧಿಕ ಅಕ್ಕಿ ಪಡಿತರ ಚೀಟಿದಾರರಿಗೆ 3,000 ರೂಪಾಯಿ ಉಡುಗೊರೆ ನೀಡಲಾಗುವುದು. ಆದಾಯ ತೆರಿಗೆ ಪಾವತಿದಾರರು ಹಾಗೂ ಕೇಂದ್ರ ಮತ್ತು ಸರ್ಕಾರಿ ನೌಕರರು, ಸಾರ್ವಜನಿಕ ಉದ್ಯೋಗಿಗಳನ್ನು ಹೊರತುಪಡಿಸಿ 2.22 ಕೋಟಿ ಪಡಿತ ಚೀಟಿದಾರರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಈ ಪೊಂಗಲ್ ಉಡುಗೊರೆ ಸಿಗಲಿದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.
ಈ ಯೋಜನೆಯಿಂದಾಗಿ ತಮಿಳುನಾಡು ರಾಜ್ಯದ ಬೊಕ್ಕಸಕ್ಕೆ 6,900 ಕೋಟಿ ರೂಪಾಯಿಗೂ ಅಧಿಕ ಹೊರೆ ಬೀಳಲಿದೆ ಎಂದು ಸ್ಟಾಲಿನ್ ಹೇಳಿಕೊಂಡಿದ್ದಾರೆ. ಈಗಾಗಲೇ ಸರ್ಕಾರ ಒಂದು ಕೋಟಿಗೂ ಹೆಚ್ಚು ಮಹಿಳೆಯರಿಗೆ ಮಾಸಿಕ 1,000 ರೂ. ಧನ ಸಹಾಯ ನೀಡುತ್ತಿದೆ. ಸರ್ಕಾರಿ ಶಾಲೆಗಳಿಂದ ಉತ್ತೀರ್ಣರಾಗಿ ಕಾಲೇಜು ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೂ ಧನ ಸಹಾಯ ನೀಡುತ್ತಿದೆ. 2026ರ ತಮಿಳುನಾಡು ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಸ್ಟಾಲಿನ್ ಈ ಪೊಂಗಲ್ ಉಡುಗೊರೆ ಘೋಷಣೆ ಮಾಡಿದ್ದಾರೆ ಎನ್ನಲಾಗಿದೆ.


