ಅನಗತ್ಯ ವಿಶ್ವವಿದ್ಯಾಲಯ ಸ್ಥಾಪಿಸಿ ಕಳಪೆ ಗುಣಮಟ್ಟದ ಶಿಕ್ಷಣ ನೀಡಿ ನಮ್ಮ ಕಾಲದಲ್ಲಿ ಇಷ್ಟು ವಿಶ್ವವಿದ್ಯಾಲಯ ಆರಂಭವಾಗಿವೆ ಎಂದು ಸಂಖ್ಯೆಯ ಹಿಂದೆ ಬೀಳುವ ಬದಲಾಗಿ, ಅದೇ ಭೂಮಿ ಹಾಗೂ ಅಷ್ಟೇ ಅನುದಾನದಲ್ಲಿ ಜಿಲ್ಲೆಗೊಂದು ಸರಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿಸಿದರೆ ಹಲವರ ಪ್ರಾಣ ಉಳಿಯುತ್ತಿತ್ತು. ಇದರಿಂದ ಬಡ ಜನರರಿಗೆ ಬಹು ವಿಧದಲ್ಲಿ ಅನುಕೂಲವಾಗುತ್ತಿತ್ತು. ಆರ್ಥಿಕವಾಗಿಯೂ ಸಾಮಾಜಿಕವಾಗಿ ಸರಕಾರಕ್ಕೆ ಒಳ್ಳೆಯ ಹೆಸರು ಬರುತ್ತಿತ್ತು. ಹಾಗೂ ನಮ್ಮಲ್ಲಿ ಅಗಾಧ ಪ್ರಮಾಣದ ನುರಿತ ವೈದ್ಯರ ಬಳಗವಿದ್ದು ಮಾನವ ಸಂಪನ್ಮೂಲಗಳ ಸಮಸ್ಯೆ ಬಾಧಿಸುತ್ತಿರಲಿಲ್ಲ.
ರಾಜ್ಯದಲ್ಲಿ ಈ ಹಿಂದಿನ ಸರಕಾರ ನೂತನವಾಗಿ ಆರಂಭಿಸಿದ್ದ ೧೦ ವಿಶ್ವವಿದ್ಯಾಲಯಗಳ ಪೈಕಿ, ಬೀದರ್ ವಿಶ್ವವಿದ್ಯಾಲಯ ಹೊರತುಪಡಿಸಿ ಇನ್ನುಳಿದ ೯ ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ಕುರಿತಾಗಿ ಸಚಿವ ಸಂಪುಟ ಸಮಿತಿಯ ಕೈಗೊಂಡಿರುವ ನಿರ್ಧಾರ ಸರಿಯೋ ತಪ್ಪೋ ಎಂದು ಪರ ವಿರೋಧ ಚರ್ಚೆಯಾಗುತ್ತಿದೆ. ವಾಸ್ತವದಲ್ಲಿ ಹಾಗೂ ಪಕ್ಷಾತೀತವಾಗಿ ವಸ್ತುಸ್ಥಿತಿ ಒಮ್ಮೆ ಅವಲೋಕಿಸುವುದಾದರೆ ವಿಶ್ವವಿದ್ಯಾಲಯ ಮುಚ್ಚುವ ನಿರ್ಧಾರ ಅತ್ಯಂತ ಸೂಕ್ತ. ಆದರೆ, ಮುಚ್ಚುವ ನಿರ್ಧಾರ ತೆಗೆದುಕೊಂಡಿರುವುದು ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವಾದ ಕಾರಣ “ಕಾಂಗ್ರೆಸ್ ತನ್ನ ಉಚಿತ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಸಲುವಾಗಿ ಇಂತಹ ನಿರ್ಧಾರ ತೆಗೆದುಕೊಂಡಿದೆ” ಎಂಬುದು ವಿರೋಧ ಪಕ್ಷ ಹಾಗೂ ಎಲ್ಲರ ಅಭಿಪ್ರಾಯವಾಗಿದೆ.
ಇಂತಹದೊಂದು ಆಲೋಚನೆ ಬರುವುದು ತಪ್ಪೇನಲ್ಲ. ಕಾರಣ ಇಂದು ಕಾಂಗ್ರೆಸ್ ಸರಕಾರದ ಉಚಿತ ಗ್ಯಾರಂಟಿ ಯೋಜನೆಯಿಂದಾಗಿ ಎಷ್ಟೆ ಅಭಿವೃದ್ಧಿ ಕಾರ್ಯಗಳಿಗೆ ತಡೆಯುಂಟಾಗಿದೆ ಎಂಬುದು ತಿಳಿದಿರುವ ಸಂಗತಿಯೇ. ಹಾಗಂತ ಕಾಂಗ್ರೆಸ್ ತೆಗೆದುಕೊಂಡ ಅಥವಾ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಗಳು ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಎಂದು ನಿರ್ಧರಿಸುವುದು ಅಷ್ಟು ಸಮಂಜಸವಲ್ಲ.
ಈ ಬಾರಿ ೯ ವಿಶ್ವವಿದ್ಯಾಲಯ ಮುಚ್ಚಬೇಕೆಂದು ತೆಗೆದುಕೊಂಡಿರುವ ನಿರ್ಧಾರ ಮಾತ್ರ ಸೂಕ್ತವಾಗಿದೆ. ಬೀದರ್ ವಿಶ್ವವಿದ್ಯಾಲಯದ ಅಧೀನದಲ್ಲಿ ನೂರಕ್ಕೂ ಹೆಚ್ಚು ಕಾಲೇಜುಗಳು ಒಳಪಟ್ಟಿರುವ ಕಾರಣ ಅದನ್ನು ಮುಚ್ಚುವುದು ಸೂಕ್ತವಲ್ಲ ಎಂಬುದು ಸರಿಯೇ. ಇವೆಲ್ಲವೂ ಕೇವಲ ಆರ್ಥಿಕ ಉಳಿತಾಯದ ದೃಷ್ಟಿಯಿಂದ ಮಾತ್ರವಲ್ಲ, ಬದಲಾಗಿ ಶೈಕ್ಷಣಿಕ ಪ್ರಗತಿಯ ದೃಷ್ಟಿಯಿಂದಲೂ ಅತ್ಯಂತ ಸರಿಯಾದ ನಿರ್ಧಾರ. ಈ ಹಿಂದಿನ ಸರಕಾರ ಆರಂಭಿಸಿದ ೧೦ ವಿಶ್ವವಿದ್ಯಾಲಯವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ರಾಜ್ಯದಲ್ಲಿ ಬರೋಬ್ಬರಿ ೪೧ ವಿಶ್ವವಿದ್ಯಾಲಯಗಳು ಅಸ್ತಿತ್ವದಲ್ಲಿ ಇದ್ದಂತಾಗುತ್ತದೆ.
ವಿಶ್ವವಿದ್ಯಾಲಯ ಆರಂಭಿಸುವುದು ಎಂದರೆ ಅದೇನು ಸರಕಾರಿ ಪ್ರಾಥಮಿಕ ಶಾಲೆ ಪ್ರಾರಂಭಿಸಿದಷ್ಟು ಅಥವಾ ದಾಖಲಾತಿ ಇಲ್ಲ ಎಂಬ ಕಾರಣಕ್ಕಾಗಿ ಮುಚ್ಚುವಷ್ಟು ಸುಲಭದ ಮಾತಲ್ಲ. ಅದು ಉನ್ನತ ವ್ಯಾಸಂಗಕ್ಕೆ ಸಂಬಂಧಿಸಿದ ಬಹುಮುಖ್ಯ ಹಂತ. ಸಾವಿರಾರು ಯುವಕರು ತಮ್ಮ ಭವಿಷ್ಯ ಕಟ್ಟಿಕೊಳ್ಳುವ ಕಾಲಘಟ್ಟ. ಹಾಗಾಗಿ ಒಂದು ವಿಶ್ವವಿದ್ಯಾಲಯ ಸ್ಥಾಪನೆಯ ಹಿಂದೆ ಹಲವು ಹಂತದ ಪೂರ್ವ ಸಿದ್ಧತೆಗಳು ಆಗಬೇಕು. ಇದ್ಯಾವುದನ್ನು ಮಾಡದೇ ಏಕಾಏಕಿಯಾಗಿ ೧೦ ವಿಶ್ವವಿದ್ಯಾಲಯ ಆರಂಭಿಸಿದರೆ ಅದರ ಗುಣಮಟ್ಟದ ಹಾಗೂ ನಿರ್ವಹಣೆ ಒಂದು ಸವಾಲಿನ ಕೆಲಸವಾಗುತ್ತದೆ.
ಯುಜಿಸಿ ನಿಯಮದನ್ವಯ ಒಂದು ಹೊಸ ವಿಶ್ವವಿದ್ಯಾಲಯ ಪ್ರಾರಂಭಕ್ಕೆ ಕನಿಷ್ಠ ೧೦೦ ಎಕರೆ ಜಾಗವಿರಬೇಕು ಹಾಗೂ ೩೦೦ ಕೋಟಿ ಹಣ ಬೇಕಾಗುತ್ತದೆ. ಆದರೆ, ಬಿಜೆಪಿ ಸರಕಾರ ಕೇವಲ ಎರಡು ಕೋಟಿ ಅನುದಾನ ನೀಡಿ, ಇನ್ನುಳಿದ ಅನುದಾನವನ್ನು ವಿಶ್ವವಿದ್ಯಾಲಯ ಆಂತರಿಕವಾಗಿ ಹೊಂದಿಸಿಕೊಳ್ಳಬೇಕೆಂದು ತಿಳಿಸಿ ಸುಮ್ಮನಾಯಿತು. ಆಗ ಇದರ ಬಗ್ಗೆ ಸ್ವಪಕ್ಷದವರೇ ಅಸಮಾಧಾನ ವ್ಯಕ್ತಪಡಿಸಿದ್ದರೂ ಸಹ ಅದು ಅಲ್ಲಿಗೆ ತಣ್ಣಗಾಯಿತು. ಎರಡು ಕೋಟಿ ಅನುದಾನದಲ್ಲಿ ಒಂದು ಸುಸಜ್ಜಿತ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಕಟ್ಟಡ ನಿರ್ಮಿಸಬಹುದೇ ವಿನಃ ಹೆಚ್ಚೇನು ಆಗದು.
ಇನ್ನುಳಿದಂತೆ ವಿಶ್ವವಿದ್ಯಾಲಯಲ್ಲಿ ನುರಿತ ಅಧ್ಯಾಪಕರ ತಂಡ, ಬೋಧಕೇತರ ಸಿಬ್ಬಂದಿ, ಪ್ರಯೋಗಾಲಯ, ಗ್ರಂಥಾಲಯ, ಕ್ರೀಂಡಾಗಣ, ಸಭಾಂಗಣ, ವಿಷಯವಾರು ಪ್ರತ್ಯೇಕ ಸಂಶೋಧನಾ ವಿಭಾಗ, ಪರೀಕ್ಷಾಂಗ ವಿಭಾಗ ಇನ್ನಿತರ ವಿಭಾಗವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಅನುಭವಿ ಸಂಶೋಧನಾ ವಿಭಾಗದ ಮುಖ್ಯಸ್ಥರು ಬೇಕಾಗುತ್ತಾರೆ. ಈಗಾಗಲೇ ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ಇರುವ ಹತ್ತಾರು ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲದಿರುವಾಗ ಇನ್ನು ಹೊಸ ವಿಶ್ವವಿದ್ಯಾಲಯ ನಿರ್ವಹಣೆ ಹೇಗೆ ಸಾಧ್ಯ? ಸರಕಾರಿ ಏಕೋಪಾಧ್ಯಾಯ ಶಾಲೆಯಾಗಿದ್ದರೆ ಒಂದೇ ಕೊಠಡಿಯಲ್ಲಿ ಬಹು ವರ್ಗ ಬೋಧನೆ ಮಾಡಬಹುದಿತ್ತು, ಇಲ್ಲಿ ಹಾಗಾಗುತ್ತದೆಯೇ?
ಈಗಿರುವ ಬಹುತೇಕ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಂದಲೇ ಎಲ್ಲ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಇನ್ನುಳಿದಂತೆ ಅತಿಥಿ ಉಪನ್ಯಾಸಕರೇ ಹೆಚ್ಚಿದ್ದಾರೆ. ಹೀಗಿರುವಾಗ ಶೈಕ್ಷಣಿಕ ಗುಣಮಟ್ಟ ಕಾಪಾಡಲು ಹೇಗೆ ಸಾಧ್ಯ ಎಂಬುದೇ ಪ್ರಶ್ನೆ. ಒಂದು ಹೊಸ ವಿಶ್ವವಿದ್ಯಾಲಯ ಆರ್ಥಿಕವಾಗಿ, ಸಾಮಾಜಿಕವಾಗಿ,ಶೈಕ್ಷಣಿಕ ವಾಗಿ ತನ್ನ ಛಾಪನ್ನು, ಗುಣಮಟ್ಟ ಹೊಂದಲು ಹಲವು ವರ್ಷಗಳೇ ಬೇಕಾಗುತ್ತದೆ. ಹೀಗಿರುವಾಗ ಇರುವ ವಿಶ್ವವಿದ್ಯಾಲಯಗಳಿಗೆ ಜೀವ ತುಂಬುವ ಕೆಲಸ ಮಾಡುವುದು ಬುದ್ಧಿವಂತಿಕೆ ನಡೆ. ಪ್ರಸ್ತುತ ೪೦ ವಿಶ್ವವಿದ್ಯಾಲಯಗಳಿಂದ ಹೊರಬರುವ ಸಾವಿರಾರು ವಿದ್ಯಾರ್ಥಿಗಳಲ್ಲಿ ಬಹುತೇಕರು ನಿರುದ್ಯೋಗಿಗಳೇ ಹೆಚ್ಚಿzರೆ. ಅಷ್ಟೆ ಉನ್ನತ ವ್ಯಾಸಂಗ ಮಾಡಿದ ಬಳಿಕವೂ ಗಳಿಸಿದ eನದ ಸದುಪಯೋಗ ಮಾಡಿಕೊಳ್ಳಲು ಅವಕಾಶವೇ ದೊರಕದಿzಗ ಹೊಸ ವಿಶ್ವವಿದ್ಯಾಲಯದಿಂದ ಏನು ತಾನೇ ನಿರೀಕ್ಷಿಸಲು ಸಾಧ್ಯ?
ಅನಗತ್ಯ ವಿಶ್ವವಿದ್ಯಾಲಯ ಸ್ಥಾಪಿಸಿ ಕಳಪೆ ಗುಣಮಟ್ಟದ ಶಿಕ್ಷಣ ಪ್ರಸಾರ ಮಾಡಿ, ನಮ್ಮ ಕಾಲದಲ್ಲಿ ಇಷ್ಟೆ ವಿಶ್ವವಿದ್ಯಾಲಯ ಆರಂಭವಾಗಿವೆ ಎಂದು ಸಂಖ್ಯೆಯ ಹಿಂದೆ ಬೀಳುವ ಬದಲಾಗಿ, ಅದೇ ಭೂಮಿ ಹಾಗೂ ಅಷ್ಟೇ ಅನುದಾನದಲ್ಲಿ ಜಿಗೊಂದು ಸರಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿಸಿದರೆ ಹಲವರ ಪ್ರಾಣ ಉಳಿಯು ತ್ತಿತ್ತು. ಇದರಿಂದ ಬಡ ಜನರಿಗೆ ಬಹು ವಿಧದಲ್ಲಿ ಅನುಕೂಲವಾಗುತ್ತಿತ್ತು. ಆರ್ಥಿಕವಾಗಿಯೂ ಸಾಮಾಜಿಕವಾಗಿ ಸರಕಾರಕ್ಕೆ ಒಳ್ಳೆಯ ಹೆಸರು ಬರುತ್ತಿತ್ತು ಹಾಗೂ ನಮ್ಮಲ್ಲಿ ಅಗಾಧ ಪ್ರಮಾಣದ ನುರಿತ ವೈದ್ಯರ ಬಳಗವಿದ್ದು ಮಾನವ ಸಂಪನ್ಮೂಲಗಳ ಸಮಸ್ಯೆ ಬಾಧಿಸುತ್ತಿರಲಿಲ್ಲ.
ಇವೆಲ್ಲದಕ್ಕಿಂತ ಮಿಗಿಲಾಗಿ ಉನ್ನತ ಹಂತದ ವ್ಯಾಸಂಗದ ಯಶಸ್ಸು ನಿಂತಿರುವುದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣದಲ್ಲಿ, ಹಾಗಾಗಿ ಮುಚ್ಚಲಾಗುತ್ತಿರುವ ಸರಕಾರಿ ಶಾಲೆಗಳನ್ನು ಮೊದಲು ಉಳಿಸಿ ಗುಣಾತ್ಮಕ ಶಿಕ್ಷಣ ನೀಡುವತ್ತ ಸರಕಾರಗಳು ಮೊದಲು ಆಸಕ್ತಿ ತೋರಬೇಕು. ಅದನ್ನು ಬಿಟ್ಟು ವಿಶ್ವವಿದ್ಯಾಲಯ ಆರಂಭದಿಂದ ಗುಣಮಟ್ಟದ ಶಿಕ್ಷಣ ನೀಡಬಹುದು ಎಂಬುದು ಒಪ್ಪಲಾರದು ಮಾತಲ್ಲವೇ?
– ಸುರೇಂದ್ರ ಪೈ ಭಟ್ಕಳ
ಶಿಕ್ಷಕ, ಬರಹಗಾರ