ಗಂಗಾವತಿಯ ಬಿಬಿಸಿ ನರ್ಸಿಂಗ್ ಕಾಲೇಜಿನ ಚೇರ್ಮನ್ ಡಾ. ಸಿಬಿ ಚಿನಿವಾಲ ವಿದ್ಯಾರ್ಥಿನಿಯ ಶುಲ್ಕ ಪಾವತಿಗಾಗಿ ಆಕೆಯ ತಾಯಿಯ ತಾಳಿಯನ್ನೇ ಒತ್ತೆಯಾಗಿಟ್ಟುಕೊಂಡ ಆರೋಪ ಕೇಳಿ ಬಂದಿದೆ.
ಕನಕಗಿರಿ ತಾಲೂಕಿನ ಮುಸ್ಲಾಪೂರ ಗ್ರಾಮದ ಕಾವೇರಿ ವಾಲಿಕಾರ್ ಎಂಬ ವಿದ್ಯಾರ್ಥಿನಿ ಗಂಗಾವತಿಯ ಬಿಬಿಸಿ ನರ್ಸಿಂಗ್ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್‌ಗೆ ಅಡ್ಮಿಶನ್ ಪಡೆದಿದ್ದಳು. ಅಡ್ಮಿಶನ್ ಸಮಯದಲ್ಲಿ ಕಾವೇರಿಯ ಪಾಲಕರು 10,000 ರೂ. ಪಾವತಿಸಿದ್ದರು ಮತ್ತು ಉಳಿದ 90,000 ರೂ. ನಂತರ ಪಾವತಿಸುವುದಾಗಿ ಭರವಸೆ ನೀಡಿದ್ದರು.
ಇತ್ತೀಚೆಗೆ ಕಾವೇರಿಗೆ ಗದಗಿನ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಸೀಟು ದೊರೆತ ಕಾರಣ, ಅವರು ಬಿಬಿಸಿ ಕಾಲೇಜಿನಿಂದ ಟಿಸಿ (ಟ್ರಾನ್ಸ್‌ಫರ್ ಸರ್ಟಿಫಿಕೇಟ್) ಕೇಳಿದ್ದಾರೆ. ಕಾವೇರಿಯ ಪಾಲಕರು ಟಿಸಿ ಕೇಳಿದಾಗ ಕಾಲೇಜು ಚೇರಮನ್ ಡಾ ಚಿನಿವಾಲ ಉಳಿದ 90,000 ರೂ. ಪಾವತಿಸಿದರೆ ಮಾತ್ರ ಟಿಸಿ ನೀಡುವುದಾಗಿ ಹೇಳಿದ್ದಾರೆ. ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದ ಹಣ ಪಾವತಿಸಲು ಸಾಧ್ಯವಿಲ್ಲ ಎಂದು ಕಾವೇರಿಯ ಪಾಲಕರು ತಿಳಿಸಿದ್ದಾರೆ.
ಹಣ ಇಲ್ಲದಿದ್ದರೆ ನಿಮ್ಮ ಮೈಮೇಲಿನ ಬಂಗಾರವನ್ನಾದರೂ ಕೊಡಿ ಎಂದು ಇದಕ್ಕೆ ಚೇರಮನ್ ಡಾ. ಚಿನಿವಾಲ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕಾವೇರಿಯ ತಾಯಿ ತಾಳಿಯನ್ನೇ ಬಿಚ್ಚಿಕೊಟ್ಟು ಟಿಸಿ ಪಡೆದಿದ್ದಾರೆ. ಮಗಳ ಶುಲ್ಕಕ್ಕಾಗಿ ತಾಳಿ ಕೇಳಿದಾಗ ಬೇರೆ ದಾರಿಯಿಲ್ಲದೇ ನನ್ನ ತಾಳಿಯನ್ನೇ ಕೊಟ್ಟೆ ಎಂದು ಕಾವೇರಿಯ ತಾಯಿ ಹೇಳಿದ್ದಾರೆ. ಕಾವೇರಿಯ ಕುಟುಂಬ ಮತ್ತು ಸ್ಥಳೀಯರು ಡಾ ಚಿನಿವಾಲ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಲೇಜಿನ ಆಡಳಿತದ ವಿರುದ್ಧ ಸ್ಥಳೀಯರಲ್ಲಿ ಆಕ್ರೋಶ ಹೆಚ್ಚಾಗಿದ್ದು, ಶಿಕ್ಷಣ ಸಂಸ್ಥೆಯೊಂದು ಈ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆ ಆರಂಭವಾಗಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.