ಬೆಂಗಳೂರು: ನೇರವಾಗಿ ಅಂಬೇಡ್ಕರ್ ಅವರನ್ನು ಎದುರಿಸಲಿಕ್ಕೆ ಆಗದವರು ಪರ್ಯಾಯ ಮಾರ್ಗ ಹಿಡಿದು ಹೋಗುತ್ತಿದ್ದಾರೆ. ಪರ್ಯಾಯ ಸಂವಿಧಾನವನ್ನು ಬಿವಿಎಸ್ ಮತ್ತು ಚಳವಳಿಗಳು ಎದುರಿಸಲಿಕ್ಕೆ ಸರ್ವಸಿದ್ಧ, ಸನ್ನದ್ದು ಆಗಿವೆ ಎಂದು ಪ್ರೊ. ಅರವಿಂದ ಮಾಲಗತ್ತಿ ಎಚ್ಚರಿಕೆ ನೀಡಿದರು.
ನಗರದ ಸುಮನಹಳ್ಳಿಯಲ್ಲಿರುವ ಡಾ. ಬಾಬು ಜಗಜೀವನರಾಮ್ ಭವನದಲ್ಲಿ ಭಾರತೀಯ ವಿದ್ಯಾರ್ಥಿ ಸಂಘದ (ಬಿವಿಎಸ್) ರಜತ ಮಹೋತ್ಸವ-2025 ಸಮಾರಂಭದಲ್ಲಿ ಅವರು ಮಾತನಾಡಿ, ದಲಿತ ಸಂಘಟನೆಗಳೆಂದರೆ ಮುಕ್ತ ವಿಶ್ವವಿದ್ಯಾದ್ಯಾಲಯ ಇದ್ದಂತೆ. ಮೂವತ್ತೇಳು ವಿಶ್ವವಿದ್ಯಾಲಯಗಳು ಇವೆ. ಅಲ್ಲಿ ಕಲಿಸದ ಪಾಠಗಳನ್ನು ನಮ್ಮ ಚಳವಳಿಗಳು ಕಲಿಸಿವೆ ಎಂದು ಹೇಳಿದರು.
ಅಂಬೇಡ್ಕರ್ ರಥ ಮತ್ತು ಪಥ ಒಟ್ಟೊಟ್ಟಿಗೆ ಸಾಗಬೇಕು. ಚಳವಳಿಯ ದಿಕ್ಕನ್ನು ಬಿವಿಎಸ್ ಬದಲಿಸಿತು. 2000ನೇ ಇಸವಿಯಿಂದ ಹಿಂದಿನದು ಡಿಎಸ್‌ಎಸ್ ಮಾಡಿದ ಧರಣಿ, ಸತ್ಯಾಗ್ರಹ, ಪ್ರತಿಭಟನೆಗಳು ಇತ್ಯಾದಿಗಳು ಭೌತಿಕ ಹೋರಾಟ ಎನ್ನಬಹುದು. 2000ನೇ ಇಸವಿಯ ನಂತರದ್ದು ಬಿವಿಎಸ್ ಮಾಡಿದ ವಿಚಾರ ಸಂಕಿರಣಗಳು, ಚರ್ಚಾಗೋಷ್ಠಿಗಳು, ಪುಸ್ತಕ/ಧ್ವನಿಸುರುಳಿ ಬಿಡುಗಡೆ ಇತ್ಯಾದಿ ಬೌದ್ಧಿಕ ಹೋರಾಟ ಎಂದು ಪರಿಗಣಿಸಹುದು ಎಂದರು.
ಶಿಕ್ಷಣ, ಸಂಘಟನೆ, ಹೋರಾಟದ ಅನುವಾದ ಮಾಡುವಲ್ಲಿ ಸಣ್ಣದಾದ ದೊಡ್ಡ ತಪ್ಪು ಮಾಡಿದ್ದೀರಿ. ಮೊದಲಿಗೆ ದಲಿತೇತರ ಬಗ್ಗೆ ಟೀಕೆ ನಮ್ಮಲ್ಲಿತ್ತು. ಬಿವಿಎಸ್ ಎಂತಹ ಬಲವಾದ ಚಿಕಿತ್ಸೆ ಕೊಟ್ಟಿದ್ದೆ ಎಂದರೆ ದಲಿತ ನಾಯಕರನ್ನು ಪ್ರಶ್ನಿಸುವ, ವಿಮರ್ಶಿಸುವಂತೆ ಮಾಡಿತು ಎಂದು ಬಿವಿಎಶ್ ಬೆಳೆದು ಬಂದ ದಾರಿಯನ್ನು ಮೆಲುಕು ಹಾಕಿದರು.
ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ಅವರು ಮಾತನಾಡಿ, ಮೆರಿಟ್ ಎನ್ನುವ ಬೌದ್ಧಿಕ ಸರ್ಕಸ್ ಶ್ರಮವನ್ನು ಹೀನಾಯಗೊಳಿಸುವುದರ ಜೊತೆಗೆ ತಳ ಸಮುದಾಯಗಳಲ್ಲಿ ಸಾಧಿಸುವ ಛಲವಿಲ್ಲ ಎನ್ನುವಂತೆ ತುಚ್ಛಿಕರಿಸುವ ಕೆಲಸವಾಗುತ್ತಿದೆ. ಈ ಪ್ರಕ್ರಿಯೆಯ ಬಗ್ಗೆ ತಳಸಮುದಾಯದವರು ಎಚ್ಚರಿಕೆಯಿಂದ ಎದುರಿಸಬೇಕು ಎಂದು ಕರೆ ನೀಡಿದರು.
ಖ್ಯಾತ ಸಾಹಿತಿ, ವಿಚಾರವಾದಿ ಯೋಗೆಶ್ ಮೇಷ್ಟ್ರು ಮಾತನಾಡಿ, ಪ್ರಸ್ತುತ ಕಾಲದಲ್ಲಿ ಯಾವ ವಿಚಾರ ಮುನ್ನೆಲೆಗೆ ಬರಬೇಕು, ಯಾವ ವಿಚಾರದ ಗಂಭೀರ ಚರ್ಚೆಯಾಗಬೇಕು ಎಂಬ ವಿಷಯವನ್ನು ಮನವರಿಕೆ ಮಾಡಿಕೊಟ್ಟರು. ಆದಾಯ ತೆರಿಗೆ ಇಲಾಖೆಯ ಆಯುಕ್ತ ಎನ್.ಎಸ್. ನೇತ್ರಪಾಲ್ ಮಾತಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಅಕ್ಕ ಐ.ಎ.ಎಸ್ ಅಕಾಡೆಮಿಯ ಮುಖ್ಯಸ್ಥರಾದ ಡಾ.ಶಿವಕುಮಾರ್ ವಹಿಸಿದ್ದರು. ತಿ.ನರಸೀಪುರದ ನಳಂದ ಬುದ್ಧವಿಹಾರದ ಭಂತೆ ಬೋಧಿರತ್ನ ವಹಿಸಿದ್ದರು. ಕಾರ್ಯಕ್ರಮದಲ್ಲಿ ಲೇಖಕಿ ಆತ್ರಾಡಿ ಅಮೃತ ಡೀಕಯ್ಯ, ಸೋಸಲೆ ಸಿದ್ಧರಾಜ್, ಶ್ರೀನಿವಾಸ್ ಜಿ., ಮಹೇಶ್ ಎ.ಎಂ., ವಕೀಲ ಶಿವರಾಜ್ ಮೋತಿ ಸೇರಿದಂತೆ ಇತರರು ಇದ್ದರು.