ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಅವರ ಕಾರಿಗೆ ಮತ್ತೊಂದು ಕಾರು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ವೇಳೆ ಈ ಅಪಘಾತ ನಡೆದಿದೆ.
ಕುಂಚೇನಹಳ್ಳಿ ಗ್ರಾಮದ ಸಮೀಪ ಸಂಸದರ ಕಾರು ಚಲಿಸುತ್ತಿದ್ದಾಗ ಹಿಂದಿನಿಂದ ಬಂದ ಬೊಲೇರೊ ಕಾರು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರುಗಳಿಗೆ ಹಾನಿಯಾಗಿದೆ. ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಕಾರಿನಲ್ಲಿದ್ದ ಸಂಸದರ ಕಚೇರಿ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.
ಅಪಾಯದಿಂದ ಪಾರಾದ ಸಂಸದರು ಎಸ್ಕಾರ್ಟ್ ವಾಹನದಲ್ಲೇ ವಿಮಾನ ನಿಲ್ದಾಣಕ್ಕೆ ತೆರಳಿ ಪ್ರಯಾಣ ಮುಂದುವರಿಸಿದ್ದಾರೆ.
ಅತಿವೇಗ, ಅಜಾಗರೂಕವಾಗಿ ಕಾರು ಚಾಲನೆ: ವೀಡಿಯೊ ಆಧರಿಸಿ ಪ್ರಕರಣ ದಾಖಲು
ಬೆಂಗಳೂರು ನಗರದ ಮೈಸೂರು ಮುಖ್ಯರಸ್ತೆಯಲ್ಲಿ ಲ್ಯಾಂಬೋರ್ಗಿನಿ ಕಾರನ್ನು ಅತಿವೇಗ ಹಾಗೂ ಅಜಾಗರೂಕವಾಗಿ ಚಲಾಯಿಸಿ ಸಾರ್ವಜನಿಕರ ಪ್ರಾಣಕ್ಕೆ ಅಪಾಯ ತಂದ ಆರೋಪದ ಮೇಲೆ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೊ ಆಧರಿಸಿ ಪೊಲೀಸರು ಸ್ವಯಂಪ್ರೇರಿತ ಕ್ರಮ ಕೈಗೊಂಡಿದ್ದಾರೆ.
ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಮಸ್ವಾಮಿ ಆರ್, ಜನವರಿ 20ರಂದು ಸಂಚಾರ ಕರ್ತವ್ಯದಲ್ಲಿದ್ದ ವೇಳೆ ಸಾಮಾಜಿಕ ಜಾಲತಾಣವಾದ ‘ಎಕ್ಸ್’ ಪರಿಶೀಲಿಸುತ್ತಿದ್ದಾಗ ಜನವರಿ 19ರಂದು ಅಪ್‌ಲೋಡ್ ಆಗಿದ್ದ ವೀಡಿಯೊ ಗಮನಕ್ಕೆ ಬಂದಿದೆ. ಸನಾತನ ಎಂಬ ಖಾತೆಯಿಂದ ಹಂಚಿಕೆಯಾಗಿದ್ದ ವೀಡಿಯೊದಲ್ಲಿ ಹಸಿರು ಬಣ್ಣದ ಲ್ಯಾಂಬೋರ್ಗಿನಿ ಹುರಾಕಾನ್ ಕಾರು ರಾಜರಾಜೇಶ್ವರಿ ನಗರಬಳಿ ಮೈಸೂರು ರಸ್ತೆಯತ್ತ ಅಪಾಯಕಾರಿಯಾಗಿ ಚಲಿಸುತ್ತಿರುವುದು ಕಂಡುಬಂದಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಪ್ರಕರಣ ದಾಖಲಾದ ಕುರಿತು ಸಂಚಾರ ಪೊಲೀಸ್ ಉಪ ಆಯುಕ್ತ ಅನೂಪ್ ಶೆಟ್ಟಿ ಮಾಹಿತಿ ನೀಡಿ, ಕಾರು ಅತಿವೇಗವಾಗಿ ಲೇನ್ ಬದಲಿಸುತ್ತ ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ಬೇಕಾಬಿಟ್ಟಿ ಚಲಾಯಿಸಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿದೆ. ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ಪಿಎಸ್‌ಐ ಸ್ವಯಂ ಪ್ರೇರಿತ ಎಫ್‌ಐಆರ್ ದಾಖಲಿಸಿದ್ದಾರೆ. ಕಾರಿನ ನೋಂದಣಿ ವಿವರ ಮತ್ತು ಚಾಲಕನ ಗುರುತು ಪತ್ತೆ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ.


