ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಅಪಹರಿಸಿ ಚಿತ್ರಹಿಂಸೆ ನೀಡಿ 28 ಲಕ್ಷ ರೂ. ದೋಚಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಲ್ವೆ ಗ್ರಾಮದ ಬಂಕ್ ಹಾಗೂ ಟ್ರಾನ್ಸ್ ಪೋರ್ಟ್ ಉದ್ಯಮಿ ಇಕ್ಬಾಲ್ ಅಪಹರಣಕ್ಕೆ ಒಳಗಾದವರು.
ಜ.24ರಂದು ಉದ್ಯಮಿ ಇಕ್ಬಾಲ್ ದೇವನಹಳ್ಳಿಯ ಖಾಸಗಿ ಹೋಟೆಲ್ ಗೆ ಹೋಗಿ ಬಳಿಕ ಬೆಂಗಳೂರಿನಲ್ಲಿರುವ ಸ್ನೇಹಿತ ಕರೀಂ ಮನೆಯಲ್ಲಿ ಉಳಿದುಕೊಂಡು ಮರುದಿನ ಜ.25ರಂದು ಬೆಳಗ್ಗೆ ಕರೀಮ್ನಿಂದ ಒಂದುವರೆ ಲಕ್ಷ ರೂ. ಪಡೆದುಕೊಂಡು ರಾತ್ರಿ 10 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 75ರ ಕುಣಿಗಲ್ ವೃತ್ತದ ಬಳಿ ಇರುವ ಸಿಮ್ ಬಿರಿಯಾನಿ ಹೋಟೆಲ್ ನಲ್ಲಿ ಊಟ ಮಾಡಿ ನೆಲಮಂಗಲದಿಂದ ಮಂಗಳೂರು ಮಾರ್ಗವಾಗಿ ತೆರಳುತ್ತಿದ್ದರು.
ಮಾರ್ಗ ಮಧ್ಯೆ ಹೆದ್ದಾರಿಯಲ್ಲಿ ಮೂರು ಕಾರುಗಳಲ್ಲಿ ಬಂದ ದುಷ್ಕರ್ಮಿಗಳು ಇಕ್ಬಾಲ್ ಅವರ ಕಾರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ಅದೇ ಕಾರಿನಲ್ಲಿ ಅವರನ್ನು ಅಪಹರಿಸಿದ್ದಾರೆ. ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಎರಡು ದಿನ ಚಿತ್ರಹಿಂಸೆ ನೀಡಿದ್ದಾರೆ. ಅವರ ಬ್ಯಾಂಕ್ ಖಾತೆಯಿಂದ ಮೊಬೈಲ್ ಮೂಲಕ 15 ಲಕ್ಷ ರೂ. ವರ್ಗಾವಣೆ ಮಾಡಿಕೊಂಡು, ಭಾನುವಾರ ಸಕಲೇಶಪುರದಲ್ಲಿದ್ದ ಸಹೋದರನ ರೆಸಾರ್ಟ್ಗೆ ತೆರಳಿ ಸಹೋದರನನ್ನು ಕೊಲೆ ಮಾಡುವುದಾಗಿ ಬೆದರಿಸಿ ಆತನಿಂದ 13 ಲಕ್ಷ ರೂ. ಪಡೆದುಕೊಂಡು, ಇಕ್ಬಾಲ್ನನ್ನು ರೆಸಾರ್ಟ್ ಬಳಿ ಬಿಟ್ಟು ಕಾರು ಹಾಗೂ ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದಾರೆ.
ಪೊಲೀಸರಿಗೆ ದೂರು ಕೊಟ್ಟರೆ ನಿನ್ನ ಉದ್ಯಮವನ್ನು ನಾಶ ಮಾಡುವುದಲ್ಲದೇ ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ಇಕ್ಬಾಲ್ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ನೆಲಮಂಗಲ ಗ್ರಾಮಾಂತರ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ.