ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗೊಲ್ಲರಹಟ್ಟಿಯ ರತ್ನನಗರದಲ್ಲಿ ಮೊಬೈಲ್ ಗೀಳಿಗೆ ಒಳಗಾಗಿ 13 ವರ್ಷದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಧ್ರುವ ಆತ್ಮಹತ್ಯೆ ಮಾಡಿಕೊಂಡ ಬಾಲಕ. 9 ವರ್ಷದ ತಂಗಿಯ ಮುಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ಅಣ್ಣ ಏನು ಮಾಡುತ್ತಿದ್ದಾನೆ ಎಂಬ ಅರಿವು ಇಲ್ಲದೆ ತಂಗಿ ಸುಮ್ಮನೆ ನೋಡುತ್ತಿದ್ದಳು.
ಧ್ರುವ ಮನೆಯವರ ಮಾತು ಕೇಳದೆ ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದ ಎಂದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪೋಷಕರು ಕೆಲಸಕ್ಕೆ ತೆರಳಿದ್ದರು. ಶಾಲೆ ಮುಗಿಸಿ ಬಂದ ಅಣ್ಣ-ತಂಗಿ ಮಾತ್ರ ಮನೆಯಲ್ಲಿದ್ದರು. ಆಗ ಬಾಲಕ ಪ್ಯಾಂಟ್ ತೆಗೆದು ಉಡಿದಾರ ಬಿಚ್ಚಿ ಫ್ಯಾನ್ಗೆ ಕಟ್ಟಿಕೊಂಡು ಆತ್ಮಹತ್ಯೆಗೆ ಯತ್ನಿಸಿ ದ್ದಾನೆ. ಉಡಿದಾರ ಕುತ್ತಿಗೆಗೆ ಬಿಗಿದು ತುಂಡಾಗಿ ಬಾಲಕ ಕೆಳಗೆ ಬಿದ್ದಿದ್ದಾನೆ. ಅಣ್ಣ ಏನು ಮಾಡಿಕೊಳ್ಳುತ್ತಿದ್ದಾನೆ ಎಂಬ ಅರಿವು ಇಲ್ಲದೇ ತಂಗಿ ಸುಮ್ಮನೆ ನೋಡುತ್ತಿದ್ದಳು.
ಬಾಲಕ ಕೆಳಗೆ ಬಿದ್ದ ಸಮಯಕ್ಕೆ ಕೆಲಸ ಮುಗಿಸಿ ತಾಯಿ ಬಂದಿದ್ದಾರೆ. ಘಟನೆ ನೋಡಿ ಆತಂಕಗೊಂಡ ತಾಯಿ ಅಕ್ಕಪಕ್ಕದವರ ಸಹಾಯ ಪಡೆದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಬಾಲಕನನ್ನು ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಬಾಲಕನ ತಂದೆ ಬಸವರಾಜ್ ಬೇಕರಿ ಕೆಲಸ ಮಾಡುತ್ತಿದ್ದು, ತಾಯಿ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದರು.