Thursday, October 23, 2025
Menu

ಗ್ಯಾರಂಟಿಗಾಗಿ 2.5 ಲಕ್ಷ ಕೋಟಿ ಸಾಲ ಮಾಡಿದ ಸರ್ಕಾರ: ಸಿಎಜಿ ವರದಿ

garantee

ಬೆಂಗಳೂರು: ಪಂಚ ಗ್ಯಾರಂಟಿಗಳಿಂದ ರಾಜ್ಯದ ಸಾಲದ ಪ್ರಮಾಣ ಹೆಚ್ಚುತ್ತಿರುವುದಾಗಿ ಸಿಎಜಿ ತನ್ನ ವರದಿಯಲ್ಲಿ ಆತಂಕ ವ್ಯಕ್ತಪಡಿಸಿದೆ.

ಗ್ಯಾರಂಟಿ ಅನುಷ್ಠಾನದ ಮೊದಲ ವರ್ಷದಲ್ಲೇ ರಾಜ್ಯದ ಸಾಲದ ಮೊತ್ತದಲ್ಲಿ ಗಣನೀಯ ಏರಿಕೆ ಆಗಿದ್ದು, ಕಳೆದೆರಡು ವರ್ಷದಲ್ಲಿ 2.5 ಲಕ್ಷ ಕೋಟಿ ಸಾಲ ಮಾಡಲಾಗಿದೆ ಎಂದು ಸಿಎಜಿ ವರದಿ ನೀಡಿದೆ.

ಪಂಚ ಗ್ಯಾರಂಟಿ ಯೋಜನೆಗಳಿಗಾಗಿ 2023ರಿಂದ ಜುಲೈ 2025ರ ವರೆಗೆ ಬರೋಬ್ಬರಿ 95,000 ಕೋಟಿ ರೂ. ಹಣ ವಿನಿಯೋಗ ಮಾಡಲಾಗಿದೆ ಎಂದು ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಂಕಿಅಂಶ ನೀಡಿದೆ.‌ ಸರಾಸರಿ ವಾರ್ಷಿಕ 50,000 ಕೋಟಿ ರೂ. ಪಂಚ ಗ್ಯಾರಂಟಿಗಳಿಗೆ ವ್ಯಯಿಸಲಾಗುತ್ತಿದೆ. ಆದರೆ, ಈ ಪಂಚ ಗ್ಯಾರಂಟಿಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗಣನೀಯ ಪ್ರಮಾಣದಲ್ಲಿ ಸಾಲದ ಮೊರೆ ಹೋಗುತ್ತಿದೆ.

ಎರಡು ಕಾಲು ವರ್ಷದಲ್ಲಿ ಗ್ಯಾರಂಟಿ ವೆಚ್ಚ ಏಷ್ಟಿದೆ? ರಾಜ್ಯ ಸರ್ಕಾರ 2023-24 ಹಣಕಾಸು ವರ್ಷದಿಂದ ಪಂಚ ಗ್ಯಾರಂಟಿಗಳಿಗಾಗಿ ಹಣ ಖರ್ಚು ಮಾಡುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳಿಗೆ 2023-24ರಲ್ಲಿ ಸುಮಾರು 36,536 ಕೋಟಿ ರೂ. ವೆಚ್ಚ ಮಾಡಲಾಗಿದೆ. 2023-24 ಸಾಲಿನಲ್ಲಿ ಗೃಹ ಲಕ್ಷ್ಮಿಗೆ 16,964 ಕೋಟಿ ರೂ., ಗೃಹ ಜ್ಯೋತಿಗೆ 8,900 ಕೋಟಿ ರೂ., ಅನ್ನಭಾಗ್ಯಕ್ಕೆ 7,384 ಕೋಟಿ ರೂ., ಶಕ್ತಿ ಯೋಜನೆಗೆ 3,200 ಕೋಟಿ ರೂ. ಮತ್ತು ಯುವನಿಧಿಗೆ 88 ಕೋಟಿ ರೂ. ಹೊರೆಯಾಗಿತ್ತು.

2024-25 ಸಾಲಿನಲ್ಲಿ ಪಂಚ ಗ್ಯಾರಂಟಿಗಾಗಿ ರಾಜ್ಯ ಸರ್ಕಾರ ಸುಮಾರು 51,000 ಕೋಟಿ ರೂ. ವ್ಯಯಮಾಡಿದೆ. ಆ ಪೈಕಿ ಗೃಹ ಲಕ್ಷ್ಮಿ ಯೋಜನೆಗಾಗಿ 28,025 ಕೋಟಿ ರೂ., ಶಕ್ತಿ ಯೋಜನೆಗಾಗಿ 5,015 ಕೋಟಿ ರೂ. ಅನ್ನಭಾಗ್ಯ ಯೋಜನೆಗೆ ಸುಮಾರು 8,060 ಕೋಟಿ ರೂ., ಗೃಹ ಜ್ಯೋತಿಗೆ ಸುಮಾರು 9,600 ಕೋಟಿ ರೂ., ಯುವನಿಧಿ ಯೋಜನೆಗೆ ಸುಮಾರು 300 ಕೋಟಿ ರೂ. ವ್ಯಯ ಮಾಡಿದೆ.

2025-26 ರಲ್ಲಿ ಪಂಚ ಗ್ಯಾರಂಟಿಗಳಿಗೆ ಜುಲೈವರೆಗೆ ಸುಮಾರು 7,523 ಕೋಟಿ ರೂ. ಖರ್ಚು ಮಾಡಿದೆ. ಅದರಲ್ಲಿ ಗೃಹ ಲಕ್ಷ್ಮಿ ಯೋಜನೆಗೆ 2,500 ಕೋಟಿ ರೂ. ಶಕ್ತಿ ಯೋಜನೆಗೆ 725 ಕೋಟಿ ರೂ., ಅನ್ನಭಾಗ್ಯ ಯೋಜನೆಗೆ 999 ಕೋಟಿ ರೂ., ಗೃಹ ಜ್ಯೋತಿ ಯೋಜನೆಗೆ 3,155 ಕೋಟಿ ರೂ., ಯುವ ನಿಧಿಗೆ 144 ಕೋಟಿ ರೂ. ವ್ಯಯಿಸಲಾಗಿದೆ ಎಂದು ಆರ್ಥಿಕ ಇಲಾಖೆ ಮಾಹಿತಿ ನೀಡಿದೆ.

ಸುಮಾರು ₹2 ಲಕ್ಷ ಕೋಟಿ ಸಾಲ: ಪಂಚ ಗ್ಯಾರಂಟಿಗಳಿಗಾಗಿ ಕಳೆದ ಎರಡು ಕಾಲು ವರ್ಷದಲ್ಲಿ ಸುಮಾರು 95,000 ಕೋಟಿ ರೂ. ಖರ್ಚು ಮಾಡಲಾಗಿದೆ. ಆ ಮೂಲಕ ಬಹುಪಾಲು ರಾಜಸ್ವ ಸಂಗ್ರಹ ಪಂಚ ಗ್ಯಾರಂಟಿಗಳಿಗಾಗಿನೇ ವ್ಯಯವಾಗಿದೆ. ಈ ಪಂಚ ಗ್ಯಾರಂಟಿಯ ಅಗಾಧ ಹೊರೆ ಹಾಗೂ ಅದರಿಂದ ಉಂಟಾಗುತ್ತಿರುವ ಕೊರತೆಯನ್ನು ನಿಭಾಯಿಸಲು ಕಾಂಗ್ರೆಸ್ ಸರ್ಕಾರ 2023-24ರಿಂದ 2025-26 ಆಗಸ್ಟ್​​ವರೆಗೆ ಸುಮಾರು 2 ಲಕ್ಷ ಕೋಟಿ ರೂ.ವರೆಗೆ ಸಾಲದ ಮೊರೆ ಹೋಗಿರುವುದಾಗಿ ಆರ್ಥಿಕ ಇಲಾಖೆ ಮಾಹಿತಿ ನೀಡಿದೆ.

ಕಾಂಗ್ರೆಸ್ ಸರ್ಕಾರ ಬಂದ ಮೊದಲ ಬಜೆಟ್ ವರ್ಷ ಅಂದರೆ, 2023-24ರಲ್ಲಿ ಪಂಚ ಗ್ಯಾರಂಟಿ ಹೊರೆಯ ಹಿನ್ನೆಲೆಯಲ್ಲಿ ಬಜೆಟ್ ಅಂದಾಜು ಮೀರಿ 90,280 ಕೋಟಿ ರೂ.ನಷ್ಟು ಸಾಲ ಮಾಡಿತ್ತು. 2023-24 ಸಾಲಿನ ಬಜೆಟ್​ನಲ್ಲಿ ಒಟ್ಟು 85,818 ಕೋಟಿ ರೂ. ಸಾಲ ಮಾಡುವುದಾಗಿ ಅಂದಾಜಿಸಲಾಗಿತ್ತು. ಆದರೆ, ಖಾತ್ರಿ ಹೊರೆ ನೀಗಿಸಲು ಬಜೆಟ್ ಅಂದಾಜಿಗಿಂತಲೂ ಹೆಚ್ಚಿನ ಸಾಲ ಮಾಡಲಾಗಿದೆ ಎಂದು ಆರ್ಥಿಕ ಇಲಾಖೆ ಅಂಕಿಅಂಶ ನೀಡಿದೆ.

2024-25 ಸಾಲಿನಲ್ಲಿ ಕಾಂಗ್ರೆಸ್ ಸರ್ಕಾರ ಇನ್ನಷ್ಟು ಹೆಚ್ಚಿನ ಸಾಲದ ಮೊರೆ ಹೋಗಿದೆ. ಪಂಚ ಗ್ಯಾರಂಟಿಯ ಹೊರೆ ಹಾಗೂ ಅದರಿಂದ ಉಂಟಾದ ಕೊರತೆಯನ್ನು ನಿಭಾಯಿಸಲು ಬರೋಬ್ಬರಿ ಒಟ್ಟು 1,07,000 ಕೋಟಿ ರೂ. ಸಾಲ ಮಾಡಿದೆ. 2024-25 ಸಾಲಿನ ಬಜೆಟ್ ನಲ್ಲಿ 1,05,246 ಕೋಟಿ ಸಾಲ ಮಾಡುವುದಾಗಿ ಅಂದಾಜಿಸಲಾಗಿತ್ತು. ಆದರೆ, ಬಜೆಟ್ ಅಂದಾಜಿಗಿಂತಲೂ ಅಧಿಕ ಸಾಲ ಮಾಡಲಾಗಿದೆ. ಇನ್ನು ಪ್ರಸಕ್ತ 2025-26 ಸಾಲಿನಲ್ಲಿ ಆಗಸ್ಟ್​ವರೆಗೆ ಸುಮಾರು 4,000 ಕೋಟಿ ರೂ. ಸಾರ್ವಜನಿಕ ಸಾಲವನ್ನು ಮಾಡಲಾಗಿದೆ ಎಂದು ಆರ್ಥಿಕ ಇಲಾಖೆ ಮಾಹಿತಿ ನೀಡಿದೆ. ಈ ಹೆಚ್ಚಿನ ಪ್ರಮಾಣದ ಸಾಲದ ಪರಿಣಾಮ ರಾಜ್ಯದ ಮೇಲಿನ ಒಟ್ಟು ಹೊಣೆಗಾರಿಕೆ ಸುಮಾರು 7,64,665 ಕೋಟಿ ರೂ‌.ಗೆ ತಲುಪಬಹುದು ಎಂದು ಆರ್ಥಿಕ ಇಲಾಖೆ ಅಂದಾಜು ಮಾಡಿದೆ.

Related Posts

Leave a Reply

Your email address will not be published. Required fields are marked *