ಹೈದ್ರಾಬಾದ್‌ನಲ್ಲಿ ಐದು ವರ್ಷಗಳಿಂದ ನಡೆಯುತ್ತಿದ್ದ ಮಕ್ಕಳ ಅಪಹರಣ ಜಾಲವನ್ನು ಪೊಲೀಸರು ಪತ್ತೆಹಚ್ಚಿ ಐವರು ಆರೋಪಿಗಳನ್ನು ಬಂಧಿಸಿ ಆರು ಮಕ್ಕಳನ್ನು ರಕ್ಷಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಹೈದರಾಬಾದ್, ಸೈಬರಾಬಾದ್ ಮತ್ತು ಸಂಗರೆಡ್ಡಿ ಜಿಲ್ಲೆಗಳಲ್ಲಿ ಐದು ವರ್ಷದೊಳಗಿನ ಮಕ್ಕಳನ್ನು ಗುರಿಯಾಗಿಸಿಕೊಂಡು ಈ ಜಾಲ ಕಾರ್ಯನಿರ್ವಹಿಸುತ್ತಿತ್ತು. ಹೆಚ್ಚು ಮಕ್ಕಳನ್ನು ಹೊಂದಿರುವ ಕಾರ್ಮಿಕ ವರ್ಗದ ಪೋಷಕರನ್ನು ಗುರಿಯಾಗಿಸಿಕೊಂಡು ಜಾಲವು ಅಪಹರಣ ದಂಧೆಯಲ್ಲಿ ತೊಡಗಿತ್ತು. ಅಪಹರಣ ಮಾಡಿದ ಮಕ್ಕಳನ್ನು ಮಕ್ಕಳಿಲ್ಲದವರಿಗೆ 1 ಲಕ್ಷದಿಂದ 7 ಲಕ್ಷ ರೂ.ಗಳವರೆಗೆ ಮಾರಾಟ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಜಿ. ವಿನೀತ್ ಮಾಹಿತಿ ನೀಡಿದ್ದಾರೆ.
4 ವರ್ಷದ ಬಾಲಕನ ಅಪಹರಣಕ್ಕೆ ಸಂಬಂಧಿಸಿದ ದೂರು ಸಲ್ಲಿಕೆಯಾದ ಬಳಿಕ ಆ.26 ರಂದು ತನಿಖೆ ಪ್ರಾರಂಭಿಸಲಾಗಿತ್ತು. ಪೊಲೀಸರು ಹುಡುಕಾಟ ನಡೆಸಿದಾಗ ಪ್ರಮುಖ ಆರೋಪಿ ಚಿಲುಕುರಿ ರಾಜು ಎಂಬಾತನ ಸುಳಿವು ಸಿಕ್ಕಿತ್ತು. ಈತ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದು, ಸಹಚರರ ಜೊತೆ ಸೇರಿ ಮಕ್ಕಳ ಮಾರಾಟ ಜಾಲ ನಡೆಸುತ್ತಿದ್ದ.
ಆರೋಪಿ ಚಿಲುಕುರಿ ರಾಜು ಬಂಧನದ ನಂತರ ದಂಧೆಯಲ್ಲಿ ಭಾಗಿಯಾಗಿದ್ದ ಇತರ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ತರಕಾರಿ ಮಾರಾಟಗಾರ ಮೊಹಮ್ಮದ್ ಆಸಿಫ್, ವೈದ್ಯ ರಿಜ್ವಾನಾ, ಮೇಸ್ತ್ರಿ ನರಸಿಂಹ ರೆಡ್ಡಿ ಮತ್ತು ಬಾಲರಾಜ್ ಎಂದು ಬಂಧಿತರು.
ರಕ್ಷಿಸಲಾದ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗೆ ಹಸ್ತಾಂತರಿಸಲಾಗಿದೆ. ಒಬ್ಬ ಬಾಲಕನ ಪೋಷಕರನ್ನು ಪತ್ತೆ ಮಾಡಲಾಗಿದೆ. ಇಬ್ಬರನ್ನು ಪೋಷಕರೇ ಮಾರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳಿಂದ 5 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.