ಬೆಂಗಳೂರು-ಮೈಸೂರು ಹೆದ್ದಾರಿಯ ಸ್ವರ್ಣಸಂದ್ರ ಬಳಿ ಹೆಲ್ಮೆಟ್ ತಪಾಸಣೆ ವೇಳೆ ಪೊಲೀಸರ ಮುಂದೆ ಗಾಡಿ ನಿಲ್ಲಿಸಲು ಮುಂದಾಗಿ ಆಯತಪ್ಪಿ ಬಿದ್ದು, ಮಗುವೊಂದು ಮೃತಪಟ್ಟಿದೆ. ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಮೂವರು ಎಎಸ್ಐಗಳನ್ನು ಸಸ್ಪೆಂಡ್ ಮಾಡಲಾಗಿದೆ. ಮಗು ಸಾವಿಗೆ ಮಂಡ್ಯ ಟ್ರಾಫಿಕ್ ಪೊಲೀಸರು ಕಾರಣವೆಂದು ಕುಟುಂಬಸ್ಥರು ಹೆದ್ದಾರಿಯಲ್ಲಿ ಪ್ರತಿಭಟನೆ ಕುಳಿತಿದ್ದರು.
ಮದ್ದೂರು ತಾಲೂಕಿನ ಗೊರವನಹಳ್ಳಿಯ ವಾಣಿ-ಅಶೋಕ್ ಅವರ ಮಗುವಿಗೆ ನಾಯಿ ಕಚ್ಚಿದ್ದು, ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಟ್ರಾಫಿಕ್ ಪೊಲೀಸರು ನಂದ ಸರ್ಕಲ್ ಬಳಿ ಹೆಲ್ಮೆಟ್ ತಪಾಸಣೆಗಾಗಿ ಬೈಕ್ ಅಡ್ಡಗಟ್ಟಿದ್ದಾರೆ. ಗಾಬರಿಕೊಂಡ ಅಶೋಕ್ ಗಾಡಿ ನಿಲ್ಲಿಸುವ ವೇಳೆ ಆಯತಪ್ಪಿ ತಂದೆ, ತಾಯಿ ಹಾಗೂ ಮಗು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಮಗು ತಲೆಯ ಮೇಲೆ ಹಿಂದಿನಿಂದ ಬಂದ ಟೆಂಪೋ ಹರಿದಿದೆ. ತೀವ್ರ ರಕ್ತಸ್ರಾವವಾಗಿ ಮಗು ಸ್ಥಳದಲ್ಲಿಯೇ ಮೃತಪಟ್ಟಿದೆ.
ಈ ಘಟನೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸ್ವಲ್ಪ ಹೊತ್ತು ಸಂಚಾರಕ್ಕೂ ತೊಂದರೆಯಾಯಿತು. ಮಂಡ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.