ಸಹೋದ್ಯೋಗಿ ಜೊತೆ ರೊಮ್ಯಾಂಟಿಕ್ ಸಂಬಂಧ ಇರಿಸಿಕೊಂಡಿರುವ ವಿಚಾರ ಬೆಳಕಿಗೆ ಬಂದ ಬಳಿಕ ಸ್ವಿಟ್ಜರ್ಲ್ಯಾಂಡ್ ನೆಸ್ಲೆ ಕಂಪನಿಯ ಸಿಇಒ ಲಾರೆಂಟ್ ಫ್ರೀಕ್ಸ್ ಅವರನ್ನು ವಜಾಗೊಳಿಸಲಾಗಿದೆ. ಫಿಲಿಪ್ ನವ್ರಾಟಿಲ್ ನೂತನ ಸಿಇಒ ಆಗಿ ನೇಮಕಗೊಂಡಿದ್ದಾರೆ.
ತನಗೆ ನೇರವಾಗಿ ರಿಪೋರ್ಟ್ ಮಾಡುವ ಸಹೋದ್ಯೊಗಿ ಮಹಿಳೆಯೊಂದಿಗೆ ಪ್ರೇಮ ಸಂಬಂಧ ಇರಿಸಿಕೊಂಡಿದ್ದ ಸಿಇಒ ಲಾರೆಂಟ್ ಫ್ರೀಕ್ಸ್ ಅವರನ್ನು ವಜಾಗೊಳಿಸಲಾಗಿದೆ. ಸಹೋದ್ಯೋಗಿ ಜೊತೆಗಿನ ಸಂಬಂಧವನ್ನು ಮುಚ್ಚಿಟ್ಟ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಹಿರಿಯ ಎಕ್ಸಿಕ್ಯೂಟಿವ್ ಆಗಿರುವ ಫಿಲಿಪ್ ನವ್ರಾಟಿಲ್ ಅವರನ್ನು ನೂತನ ಸಿಇಒ ಆಗಿ ನೇಮಕ ಮಾಡಲಾಗಿದೆ ಂದು ಕಂಪೆನಿ ಹೇಳಿದೆ.
ಸಹೋದ್ಯೋಗಿ ಜೊತೆ ಲಾರೆಂಟ್ ಫ್ರೀಕ್ಸೆ ಅವರಿಗೆ ರೋಮ್ಯಾಂಟಿಕ್ ರಿಲೇಶನ್ಶಿಪ್ ಇರುವುದಾಗಿ ರಹಸ್ಯವಾಗಿ ದೂರು ದಾಖಲಾಗಿತ್ತು. ಕಂಪನಿಯ ಛೇರ್ಮನ್ ಪೌಲ್ ಬುಲ್ಕೆ ಮತ್ತು ಸ್ವತಂತ್ರ ನಿರ್ದೇಶಕ ಪಾಬ್ಲೊ ಇಸ್ಲಾ ಕಣ್ಗಾವಲಿನಲ್ಲಿ ಆಂತರಿಕ ಮತ್ತು ಬಾಹ್ಯ ತನಿಖೆ ನಡೆಸಿದಾಗ ಲಾರೆಂಟ್ ಸಹೋದ್ಯೋಗಿ ಜೊತೆ ಸಂಬಂಧ ಹೊಂದಿರುವುದು ಖಚಿತಗೊಂಡಿದೆ. ನಂತರ ಅವರನ್ನು ಸಿಇಒ ಸ್ಥಾನದಿಂದ ವಜಾಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು. ಸಿಇಒ ಸ್ಥಾನ ಮಾತ್ರವಲ್ಲ, ನೌಕರಿಯಿಂದಲೇ ಅವರನ್ನು ತೆಗೆಯಲಾಗಿದೆ. ಎಕ್ಸಿಟ್ ಪ್ಯಾಕೇಜ್ ಕೂಡ ನೀಡದೆ ಕಳುಹಿಸಲಾಗಿದೆ.
ಇದು ಅಗತ್ಯವಾಗಿರುವ ನಿರ್ಧಾರ. ನೆಸ್ಲೆಯ ಬಲ ಇರುವುದೇ ಅದರ ಮೌಲ್ಯಗಳಲ್ಲಿ. ಇಷ್ಟು ವರ್ಷ ಕಂಪನಿಗೆ ಸೇವೆ ಸಲ್ಲಿಸಿದ ಲಾರೆಂಟ್ ಅವರಿಗೆ ಧನ್ಯವಾದ ಹೇಳಬಯಸುತ್ತೇನೆ ಎಂದು ಛೇರ್ಮನ್ ಪೌಲ್ ಬಲ್ಕೆ ತಿಳಿಸಿದ್ದಾರೆ. ಇತ್ತೀಚೆಗೆ ಆಸ್ಟ್ರಾನಾಮರ್ ಎನ್ನುವ ಕಂಪನಿಯ ಸಿಇಒ ಆಂಡಿ ಬೈರೋನ್ ಸಹೋದ್ಯೋಗಿ ಜೊತೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡ ದೃಶ್ಯ ವೈರಲ್ ಆಗಿತ್ತು. ಬಳಿಕ ಆಂಡಿ ಅವರು ರಾಜೀನಾಮೆ ನೀಡಬೇಕಾಯಿತು.