ಅವಧಿಗೂ ಮೊದಲೇ ಕರ್ನಾಟಕದಲ್ಲಿ ಮುಂಗಾರು ಮಳೆ ಆರಂಭಗೊಂಡಿದ್ದು, ಬಿರುಗಾಳಿ ಮಳೆಯಿಂದ ಕರಾವಳಿ ಜಿಲ್ಲೆಗಳಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಶಿರಾಡಿ ಘಾಟ್ ರಸ್ತೆಯಲ್ಲಿ ಎರಡು ಕಡೆ ಭೂ ಕುಸಿತ ಉಂಟಾಗಿದೆ. ಬೆಂಗಳೂರು ಟು ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75 ರಸ್ತೆಗೆ ಮಣ್ಣು ಕುಸಿಯುತ್ತಿದೆ.
ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಸಕಲೇಶಪುರ ತಾಲೂಕಿನ ದೋಣಿಗಾಲ್ ಮತ್ತು ಅಡ್ಡನಗುಡ್ಡದ ಬಳಿ ಶಿರಾಡಿ ಘಾಟ್ ರಸ್ತೆಯಲ್ಲಿ ಭೂ ಕುಸಿತವುಂಟಾಗಿ ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿದೆ. ತಡೆಗೋಡೆ ನಿರ್ಮಿಸಿದ್ದರೂ ನಿರಂತ ಮಳೆಗೆ ಮಣ್ಣು ಕುಸಿಯುತ್ತಿದ್ದು, ಮರಗಳು ನೆಲಕ್ಕೆ ಉರುಳುತ್ತಿವೆ. ಮಳೆಗೆ ಅಪಾರ ಮೌಲ್ಯದ ಕಾಫಿ ಬೆಳೆ ನಾಶವಾಗಿದೆ.
ಬೇಲೂರು ತಾಲೂಕಿನ ಕುಪ್ಪಗೋಡು ಗ್ರಾಮದಲ್ಲಿ ಕೆರೆ ಕೋಡಿ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿದೆ, ಗದ್ದೆ, ತೆಂಗಿನ ತೋಟಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿ ಆಗಿದೆ. 60 ಎಕರೆ ಜಮೀನಿಗೆ ಕೆರೆ ನೀರು ನುಗ್ಗಿದ್ದು, ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಸಕಲೇಶಪುರ, ಆಲೂರು, ಬೇಲೂರು, ಹಾಸನದಲ್ಲಿ ಬಿರುಗಾಳಿಯೊಂದಿಗೆ ಎಡೆಬಿಡದೆ ಮಳೆ ಸುರಿಯುತ್ತಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ರಸ್ತೆಗಳು ಕಾಣದಂತಾಗಿವೆ. ಮನೆಯಿಂದ ಹೊರಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿರುಗಾಳಿಯಿಂದ ವಿದ್ಯುತ್ ಕಂಬಗಳು ಮತ್ತು ಮರಗಳು ನೆಲಕ್ಕುರುಳುತ್ತಿವೆ. ಸಕಲೇಶಪುರ, ಬೇಲೂರು ತಾಲೂಕಿನ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.