ಬೆಂಗಳೂರಿನಲ್ಲಿ 26 ವರ್ಷದ ಮಹಿಳೆಯ ಜೊತೆ 52 ವರ್ಷದ ಪುರುಷ ಸಹಜೀವನ ನಡೆಸುತ್ತಿದ್ದು, ಈ ಸಂಬಂಧವು ಮಹಿಳೆಯ ಕೊಲೆಯಲ್ಲಿ ಅಂತ್ಯ ಕಂಡಿದೆ. ಪೆಟ್ರೊಲ್ ಎರಚಿ ಮಹಿಳೆಯನ್ನು ಸಂಗಾತಿಯಾಗಿದ್ದ ವ್ಯಕ್ತಿ ಬರ್ಬರವಾಗಿ ಸಾಯಿಸಿದ್ದಾನೆ. ವನಜಾಕ್ಷಿ ಕೊಲೆಯಾದ ಮಹಿಳೆ, ಕ್ಯಾಬ್ ಚಾಲಕ ವಿಠಲ ಕೊಲೆಗಾರನಾಗಿದ್ದು, ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.
ಈ ಜೋಡಿ ಆನೇಕಲ್ ಬಳಿಯ ಮಳೆನಲ್ಲಸಂದ್ರದ ಗ್ರಾಮದ ನಿವಾಸಿಗಳು, ವನಜಾಕ್ಷಿಗೆ ಮದುವೆಯಾಗಿ ಗಂಡ ಮೃತಪಟ್ಟಿದ್ದರು, ಆರೋಪಿ ವಿಠ್ಠಲನಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಮೃತಪಟ್ಟಿದ್ದು, ಎರಡನೇ ಪತ್ನಿ ಬೇರೊಬ್ಬರ ಜೊತೆ ಪರಾರಿ ಯಾಗಿದ್ದಳು.
ಬಳಿಕ ವಿಠಲ ವನಜಾಕ್ಷಿಯ ಸಾಂಗತ್ಯ ಬೆಳೆಸಿ ಮೂರ್ನಾಲ್ಕು ವರ್ಷಗಳಿಂದ ಲಿವ್‌ಇನ್ ಟುಗೆದರ್‌ನಲ್ಲಿದ್ದರು. ವನಜಾಕ್ಷಿ ಇತ್ತೀಚಿಗೆ ವಿಠ್ಠಲನ ಅವಾಯ್ಡ್ ಮಾಡಲು ಶುರು ಮಾಡಿ, ಗ್ರಾಮದ ಮತ್ತೊಬ್ಬರ ಜೊತೆಗೆ ಸಲುಗೆಯಲ್ಲಿದ್ದರು. ಈ ವಿಚಾರಕ್ಕೆ ವಿಠಲ ಜಗಳವಾಡುತ್ತಿದ್ದ.
ಕಳೆದ ಶನಿವಾರ ವನಜಾಕ್ಷಿ ಬನ್ನೇರುಘಟ್ಟದಿಂದ ಬಸವನಪುರಕ್ಕೆ ಹೊಸ ಸ್ನೇಹಿತನ ಜೊತೆ ಕಾರಲ್ಲಿ ತೆರಳುತ್ತಿರುವುದನ್ನು ನೋಡಿ ವಿಠಲ ಹುಳಿಮಾವು ಠಾಣೆ ವ್ಯಾಪ್ತಿಯ ಹೊಮ್ಮದೇವನಹಳ್ಳಿ ಬಳಿ ಕಾರನ್ನು ನಿಲ್ಲಿಸಿ ಐದು ಲೀಟರ್ ಪೆಟ್ರೋಲ್ ಕಾರಿನ ಮೇಲೆ ಸುರಿಯಲು ಯತ್ನಿಸಿದ್ದಾನೆ. ಆಗ ವನಜಾಕ್ಷಿ ಹಾಗೂ ಆಕೆಯ ಸ್ನೇಹಿತ ಕಾರಿನಿಂದ ಇಳಿದು ಓಡಲಾರಂಭಿಸಿದ್ದಾರೆ.
ಆದರೂ ಬಿಡದೆ ವಿಠಲ ಹಿಂಬಾಲಿಸಿಕೊಂಡು ಹೋಗಿ ವನಜಾಕ್ಷಿ ಮೇಲೆ ಪೆಟ್ರೋಲ್ ಎರಚಿ ಲೈಟರ್ ನಿಂದ ಬೆಂಕಿ ಹಚ್ಚಿದ್ದ. 60% ಸುಟ್ಟ ಗಾಯಗಳಿಂದ ಚಿಕಿತ್ಸೆ ಫಲಕಾರಿಯಾಗದೆ ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಹುಳಿಮಾವು ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದ್ದು, ಆರೋಪಿ ವಿಠ್ಠಲನನ್ನು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.