ಕಳೆದ ಏಪ್ರಿಲ್‌ನಲ್ಲಿ ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ ನಿವಾಸದಲ್ಲಿ ಡಿಜಿ ಐಜಿಪಿ ಓಂಪ್ರಕಾಶ್ ಅವರನ್ನು ಪತ್ನಿ ಪಲ್ಲವಿ ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಹಲವು ವಿಚಾರಗಳನ್ನು ಪತ್ತೆ ಹಚ್ಚಿದೆ.
ಕೌಟುಂಬಿಕ ಕಾರಣಗಳಿಂದ ಗಂಡನ ಮೇಲೆ ವಿಪರೀತ ಕೋಪ ಹೊಂದಿದ್ದ ಪಲ್ಲವಿ ಪತಿಯನ್ನು ಕ್ರೂರವಾಗಿ ಕೊಂದಿದ್ದರು. ಮಗಳಿಗೆ ಮದುವೆ ಮಾಡ್ತಿಲ್ಲ ಎಂಬ ಕೋಪವೂ ಆಕೆಗೆ ಗಂಡನ ಮೇಲಿತ್ತು. ಅಷ್ಟು ದೊಡ್ಡ ಮನೆಯಲ್ಲಿದ್ದರೂ ಪಲ್ಲವಿಯ ಕೈಗೆ ಹಣ ಕೊಡದೆ ಹಣದ ವ್ಯವಹಾರವನ್ನು ಓಂ ಪ್ರಕಾಶ್ ತಾನೇ ನೋಡಿಕೊಳ್ಳುತ್ತಿದ್ದರು ಎಂಬ ಸಿಟ್ಟೂ ಪಲ್ಲವಿಗಿತ್ತು. ತನ್ನ ಸ್ವಂತ ಕುಟುಂಬಕ್ಕಿಂತಲೂ ತಂಗಿ ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದ ಕಾರಣ ಗಂಡ ಸ್ವಂತ ಕುಟುಂಬದ ಬಗ್ಗೆ ತಲೆ ಕೆಡಿಸಿಕೊಳ್ತಿಲ್ಲ ಎಂಬುದು ಪಲ್ಲವಿಯ ದ್ವೇಷಕ್ಕೆ ಮುಖ್ಯ ಕಾರಣವಾಗಿತ್ತು ಎಂಬುದನ್ನು ಸಿಸಿಬಿ ತನಿಖೆ ವೇಳೆ ಪತ್ತೆ ಹಚ್ಚಿದೆ.
ಈ ಎಲ್ಲಾ ಕಾರಣಗಳಿಂದ ಗಂಡನ ಮೇಲೆ ದ್ವೇಷದ ಜೊತೆಗೆ ಪಲ್ಲವಿ ಮಾನಸಿಕವಾಗಿಯು ತೊಂದರೆಗೆ ಒಳಗಾಗಿದ್ದರು. ಕೊಲೆಯಲ್ಲಿ ಮಗಳು ಕೃತಿ ಭಾಗಿಯಾಗಿರುವ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲ, ಆಕೆ ಕೊಲೆ ವೇಳೆ ಮನೆಯಲ್ಲೇ ಇದ್ದರೂ ಭಾಗಿಯಾಗಿಲ್ಲ ಎಂಬುದನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದು, ತನಿಖೆ ಮುಂದುವರಿಸಿದ್ದಾರೆ.