ಸಿಂಧೂ ನದಿಯ ನೀರು ಬಿಡುವುದನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ ವಿಶ್ವ ಸಂಸ್ಥೆಯಲ್ಲಿ ಪಾಕಿಸ್ತಾನ ತಕರಾರು ಎತ್ತಿ ಭಾರತದ ನಿರ್ಧಾರವನ್ನು ಟೀಕಿಸಿದೆ. ಇದಕ್ಕೆ ಭಾರತ ಸೂಕ್ತ ಪ್ರತಿಕ್ರಿಯೆ ನೀಡಿದ್ದು, 1960 ರ ನೀರು ಹಂಚಿಕೆ ಒಪ್ಪಂದ ಉಲ್ಲಂಘಿಸಿದ್ದು ಭಾರತವಲ್ಲ, ಪಾಕಿಸ್ತಾನ, ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿ ದಂತೆ ಪಾಕಿಸ್ತಾನಿ ನಿಯೋಗ ಅನೇಕ ತಪ್ಪು ಮಾಹಿತಿಯನ್ನು ಹರಡಿದೆ ಎಂದು ಹೇಳಿದೆ.
ಪಹಲ್ಗಾಮ್ ದಾಳಿ ಮಾತ್ರವಲ್ಲದೆ ಅನೇಕ ಉದಾಹರಣೆಗಳನ್ನು ನೀಡಿದ ಭಾರತ, ಭಯೋತ್ಪಾದನೆ ದಾಳಿಯೊಂದಿಗೆ ಪಾಕ್ ಭಾರತದ ಜತೆಗೆ ಮಾಡಿಕೊಂಡ ಹಲವು ಒಪ್ಪಂದವನ್ನು ಉಲ್ಲಂಘನೆ ಮಾಡಿದೆ ಎಂದು ತಿಳಿಸಿದೆ.
ಪಾಕ್ ಮಾಡುತ್ತಿರುವ ಆರೋಪಗಳನ್ನು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ತಳ್ಳಿಹಾಕಿದ್ದಾರೆ. ಮತ್ತೆ ಮತ್ತೆ ಭಾರತದ ಮೇಲೆ ಗಡಿಯಾಚೆಗಿನ ಭಯೋತ್ಪಾದನೆ ದಾಳಿಯಿಂದ ಸಿಂಧೂ ಒಪ್ಪಂದವನ್ನು ಮುರಿದುಕೊಳ್ಳ ಲಾಗಿದೆ ಎಂದು ಹೇಳಿದ್ದಾರೆ. ಭಾರತವು 65 ವರ್ಷಗಳ ಹಿಂದೆ ಸಿಂಧೂ ನದಿ ಜಲ ಒಪ್ಪಂದವನ್ನು ಮಾಡಿಕೊಂಡಿತ್ತು. ಒಪ್ಪಂದದ ಪೀಠಿಕೆ ಪ್ರಕಾರ, ಈ ಒಪ್ಪಂದವನ್ನು ಸದ್ಭಾವನೆ ಮತ್ತು ಸ್ನೇಹದ ಮನೋಭಾವದಿಂದ ಮಾಡಿಕೊಂಡಿ ರುವುದು. ಬಳಿಕ ಪಾಕಿಸ್ತಾನವು ಭಾರತದ ಮೇಲೆ ಮೂರು ಯುದ್ಧಗಳು ಮತ್ತು ಸಾವಿರಾರು ಭಯೋತ್ಪಾದಕ ದಾಳಿಗಳನ್ನು ನಡೆಸುವ ಮೂಲಕ ಒಪ್ಪಂದದ ಮಹತ್ವವನ್ನು ಉಲ್ಲಂಘಿಸಿದೆ. ನಾಲ್ಕು ದಶಕಗಳಲ್ಲಿ ಭಯೋತ್ಪಾದಕ ದಾಳಿಯಲ್ಲಿ 20,000 ಕ್ಕೂ ಹೆಚ್ಚು ಭಾರತೀಯರು ಮೃತ ಪಟ್ಟಿದ್ದಾರೆ ಎಂದು ಮಾಹಿತಿ ನೀಡಿ ದ್ದಾರೆ. 65 ವರ್ಷಗಳಲ್ಲಿ ಗಡಿಯಾಚೆಗಿನ ಭಯೋತ್ಪಾದಕ ದಾಳಿಗಳ ಮೂಲಕ ಭದ್ರತಾ ಕಾಳಜಿಗಳನ್ನು ಹೆಚ್ಚಿಸುವುದರ ಜೊತೆಗೆ ಶುದ್ಧ ಇಂಧನ ಉತ್ಪಾದನೆ, ಹವಾಮಾನ ಬದಲಾವಣೆ ಮತ್ತು ಜನಸಂಖ್ಯಾ ಬಗ್ಗೆಯೂ ಭಾರತದ ಗಮನ ನೀಡಿದೆ ಎಂದು ಹೇಳಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಸಿಂಧೂ ನದಿ ಜಲ ಒಪ್ಪಂದದ ಮಾರ್ಪಾಡುಗಳ ಕುರಿತು ಚರ್ಚಿಸಲು ಭಾರತ ಪಾಕಿಸ್ತಾನವನ್ನು ಔಪಚಾರಿಕವಾಗಿ ಕೇಳಿದೆ, ಪಾಕಿಸ್ತಾನ ಇವುಗಳನ್ನು ತಿರಸ್ಕರಿಸುತ್ತಲೇ ಇತ್ತು. ಭಯೋತ್ಪಾದನೆಯ ಜಾಗತಿಕ ಕೇಂದ್ರಬಿಂದುವಾಗಿರುವ ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸುವ ವರೆಗೆ ನಾವು ಈ ನಿರ್ಧಾರದಲ್ಲೇ ಇರುತ್ತೇವೆ ಎಂದು ಪರ್ವತನೇನಿ ಹರೀಶ್ ಹೇಳಿದ್ದಾರೆ.