ಮೂವರು ಮಕ್ಕಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 35 ಕೋವಿಡ್ ಪ್ರಕರಣಗಳು ದಾಖಲಾಗಿವೆ. 35 ಸಕ್ರಿಯ ಪ್ರಕರಣಗಳಲ್ಲಿ ಬೆಂಗಳೂರಿನಲ್ಲೇ 32 ಕೇಸ್ ದೃಢಪಟ್ಟಿದೆ. ದೇಶದಲ್ಲಿ ಕೋವಿಡ್ ಪ್ರಕರಣ ಮತ್ತೆ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ ಕೂಡ ಅಲರ್ಟ್ ಆಗಿದ್ದು, ಕ್ರಮಕ್ಕೆ ಮುಂದಾಗಿದೆ.
ಬೆಂಗಳೂರು ವಾಣಿ ವಿಲಾಸ ಆಸ್ಪತ್ರೆಯಲ್ಲಿ ಒಂದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಎರಡು ಶಿಶುಗಳಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗಿದ್ದು, ಚಿಕಿತ್ಸೆ ಮುಂದುವ ರಿದಿದೆ. ಬೆಂಗಳೂರಲ್ಲಿ ಕೋವಿಡ್ ಸಕ್ರಿಯ ಪ್ರಕರಣ ಹೆಚ್ಚು ಇರುವ ಕಾರಣ ನಾಳೆಯಿಂದ ಕೋವಿಡ್ ಟೆಸ್ಟ್ ಆರಂಭಿಸಲು ನಿರ್ಧಾರ ಮಾಡಲಾಗಿದೆ. ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ಮಾಡಲು ಸಿದ್ಧತೆ ನಡೆದಿದೆ.
ಬೆಂಗಳೂರು ನಗರದ ಮೆಡಿಕಲ್ ಕಾಲೇಜು, ಜಿಲ್ಲಾಸ್ಪತ್ರೆಯಲ್ಲಿ ಮತ್ತೆ ಎಂಟು ಆರ್ಟಿಪಿಸಿಆರ್ ಟೆಸ್ಟಿಂಗ್ ಲ್ಯಾಬ್ಗಳನ್ನ ಓಪನ್ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಕೋವಿಡ್ ಪ್ರಕರಣ ಏರಿಕೆಯ ಭೀತಿ ಹಿನ್ನೆಲೆಯಲ್ಲಿ ಮೊದಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಳಿಕ ಬೌರಿಂಗ್ ಸೇರಿ ಉಳಿದ ಆಸ್ಪತ್ರೆಯಲ್ಲಿ ಟೆಸ್ಟಿಂಗ್ ಹೆಚ್ಚಳ ಮಾಡಲು ತಯಾರಿ ನಡೆಸಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ಸಿಎಂ ಸಿದ್ದರಾಮಯ್ಯನವರು ಮೈಸೂರು ನಿವಾಸದ ಬಳಿ ಮಾಸ್ಕ್ ಧರಿಸಿ ಹೊರಗೆ ಬಂದು ಸಾರ್ವಜನಿಕರ ಮನವಿ ಪತ್ರಗಳನ್ನು ಸ್ವೀಕಾರ ಮಾಡಿದರು.
ದೇಶಾದ್ಯಂತ 257 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಕೇರಳವು 95 ಸಕ್ರಿಯ ಪ್ರಕರಣಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ತಮಿಳುನಾಡು 66 ಮತ್ತು ಮಹಾರಾಷ್ಟ್ರಗಳಲ್ಲಿ 56 ಸಕ್ರಿಯ ಪ್ರಕರಣಗಳು ಇವೆ. ದೆಹಲಿ (23), ಪುದುಚೇರಿ (10), ಕರ್ನಾಟಕ (13), ಗುಜರಾತ್ (7), ರಾಜಸ್ಥಾನ (2), ಹರಿಯಾಣ (1), ಸಿಕ್ಕಿಂ (1), ಮತ್ತು ಪಶ್ಚಿಮ ಬಂಗಾಳ (1)ಗಳಲ್ಲಿ ದಾಖಲಾದೆ. ಮೇ 12 ರಿಂದ ಭಾರತದಲ್ಲಿ 164 ಹೊಸ ಪ್ರಕರಣಗಳು ದಾಖಲಾಗಿವೆ. ಸೋಂಕಿತರು ಆಸ್ಪತ್ರೆಗೆ ದಾಖಲಾಗಿಲ್ಲ. ಸಿಂಗಾಪುರ ಮತ್ತು ಹಾಂಗ್ಕಾಂಗ್ನಲ್ಲಿ ಕೋವಿಡ್ ರೂಪಾಂತರಿ ಒಮಿಕ್ರಾನ್ ಜೆಎನ್1 ಉಪ ತಳಿಗಳಾದ ಎನ್ಬಿ.1.8 ಮತ್ತು ಎಲ್ಎಫ್.7 ವ್ಯಾಪಿಸುತ್ತಿದೆ.