Menu

ಅಥಣಿಯಲ್ಲಿ ಮಕ್ಕಳಾಗಿಲ್ಲವೆಂದು ಸೊಸೆಯನ್ನು ಕೊಂದ ಅತ್ತೆ ಮಾವ

ಸೊಸೆಗೆ ಮಕ್ಕಳಾಗಿಲ್ಲವೆಂದು ಆಕೆಯನ್ನು ಅತ್ತೆ ಮತ್ತು ಮಾವ ಸೇರಿ ಕೊಲೆ ಮಾಡಿರುವ ಘಟನೆ ಅಥಣಿ ತಾಲೂಕಿನ ಮಲ್ಲಬಾದ್ ಗ್ರಾಮದಲ್ಲಿ ನಡೆದಿರುವುದು ಬಹಿರಂಗಗೊಂಡಿದೆ. ಚಡಚಣದ ನಿವಾಸಿ ರೇಣುಕಾ ಹೊನಕುಂಡೆ ಕೊಲೆಯಾದವರು. ರೇಣುಕಾಳ ಪತಿ ಸಂತೋಷ್‌ನ ತಂದೆ ಕಾಮಣ್ಣ, ತಾಯಿ ಜಯಶ್ರೀ ಕೊಲೆ ಮಾಡಿದವರು. ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರೇಣುಕಾ ಹೊನಕುಂಡೆ ಬಿಎಚ್ಎಂಎಸ್ ಮುಗಿಸಿದ್ದು, 2020ರಲ್ಲಿ ಬೆಳಗಾವಿಯ ಅಥಣಿ ತಾಲೂಕಿನ ಮಲ್ಲಬಾದ್ ಗ್ರಾಮದ ಸಂತೋಷ್​ ಹೊನಕುಂಡೆ ಎಂಬ ಮೆಕ್ಯಾನಿಕಲ್ ಇಂಜಿನಿಯರ್‌ನನ್ನು ಮದುವೆಯಾಗಿದ್ದರು. ಮೂರು ವರ್ಷ ಕಳೆದ ಬಳಿಕ ರೇಣುಕಾಗೆ ಮೂರ್ಛೆ ರೋಗ ಇರುವುದು ಗಂಡ ಸಂತೋಷ್​ಗೆ ಗೊತ್ತಾಗು ತ್ತದೆ. ಆಕೆಗೆ ಮಕ್ಕಳು ಕೂಡ ಆಗುತ್ತಿಲ್ಲವೆಂದು ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಮಹಿಳೆ ಜೊತೆಗೆ ಸಂಬಂಧ ಇಟ್ಟುಕೊಳ್ಳುತ್ತಾನೆ. ರೇಣುಕಾಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಶುರು ಮಾಡುತ್ತಾನೆ. ಸಂತೋಷ್​ ತಂದೆ-ತಾಯಿ ಕೂಡ ಸಾಥ್ ನೀಡುತ್ತಾರೆ.

ಕೆಲವು ತಿಂಗಳ ಹಿಂದೆ ಅನೈತಿಕ ಸಂಬಂಧ ಇಟ್ಟುಕೊಂಡಾಕೆ ಗರ್ಭಿಣಿಯಾಗಿದ್ದು ಮನೆಗೆ ಕರೆದುಕೊಂಡು ಆಕೆಯನ್ನು ಮದುವೆಯಾಗುವುದಾಗಿ ಹೇಳುತ್ತಾನೆ. ಎಲ್ಲರೂ ಸೇರಿ ರೇಣುಕಾಗೆ ಕಿರುಕುಳ ನೀಡುತ್ತಾರೆ. ರೇಣುಕಾ ಮನೆ ಬಿಟ್ಟು ಹೋಗುವುದಿಲ್ಲವೆಂದು ತಿಳಿದು ಗಂಡ ಸಂತೋಷ್‌ ಮತ್ತು ಅತೆ ಮಾವ ಆಕೆಯನ್ನು ಕೊಲ್ಲುವ ಸಂಚು ರೂಪಿಸುತ್ತಾರೆ.

ಶನಿ ದೇವರಿಗೆ ಹೋಗಿ ಬರೋಣ ಎಂದು ಹೇಳಿ ಅತ್ತೆ ಜಯಶ್ರೀ ಸೊಸೆ ರೇಣುಕಾರನ್ನು ಕರೆದುಕೊಂಡು ಅಥಣಿ ತಾಲೂಕಿನ ಮದುಬಾವಿ ಗ್ರಾಮಕ್ಕೆ ಹೋಗಿ ಸಂಜೆ ಎಂಟು ಗಂಟೆಗೆ ನಾಲ್ಕು ಕಿಮೀ ದೂರದಲ್ಲಿ ಹಾದು ಹೋಗುವ ಮುಖ್ಯ ರಸ್ತೆ ಬಳಿ ಬಂದು ಬಸ್ ಇಳಿಯುತ್ತಾರೆ. ಬಸ್ ಇಳಿದು ನಡೆದುಕೊಂಡು ಹೋಗುವುದು ಬೇಡ ಎಂದು ಜಯಶ್ರೀ ಗಂಡ ಕಾಮಣ್ಣನಿಗೆ ಕರೆ ಮಾಡಿ ಬೈಕ್ ತರುವಂತೆ ಹೇಳುತ್ತಾರೆ. ಊರ ಕ್ರಾಸ್​ಗೆ ಬೈಕ್ ಸಮೇತ ಬಂದ ಕಾಮಣ್ಣ ಹೆಂಡತಿಗೆ ಮಧ್ಯದಲ್ಲಿ ಸೊಸೆ ಹಿಂಬದಿ ಕೂಡಿಸಿಕೊಂಡು ಒಂದು ಕಿಮೀ ದೂರ ಒಳಗೆ ಬಂದು ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿ ರೇಣುಕಾಳ ಕತ್ತು ಹಿಡಿದು ಸೀರೆ ಸೆರಗಿನಿಂದ ಅತ್ತೆ-ಮಾವ ಬಿಗಿದು ಉಸಿರುಗಟ್ಟಿಸಿ ಕೊಂದು ಹಾಕಿದ್ದರು. ಬಳಿಕ ಇಬ್ಬರೂ ಆಕೆಯ ಕುತ್ತಿಗೆಗೆ ಸೀರೆ ಕಟ್ಟಿ ಮತ್ತೊಂದು ಭಾಗವನ್ನು ಬೈಕ್‌ಗೆ ಕಟ್ಟಿ ಶವವನ್ನು ನೂರು ಇನ್ನೂರು ಮೀಟರ್ ನಷ್ಟು ಬೈಕ್ ಮೇಲೆ ಎಳೆದುಕೊಂಡು ಹೋಗಿ ಅಪಘಾತವಾಗಿ ಸೊಸೆ ಸತ್ತಳು ಎಂದು ಬಿಂಬಿಸಿದ್ದರು.

ಕೊಲೆ ಮಾಡಿದ ಬಳಿಕ ಮಗನಿಗೆ ಕರೆ ಮಾಡಿ ಸೊಸೆ ಕಥೆ ಮುಗಿಸಿದ್ದೇವೆ ಎಂದು ಹೇಳಿ, ಆಕೆ ಬೈಕ್ ಮೇಲಿಂದ ಬಿದ್ದು ಸತ್ತಿದ್ದಾಳೆ ಎಂದು ಅಥಣಿ ಠಾಣೆ ಪೊಲೀಸರಿಗೆ ಸುದ್ದಿ ಮುಟ್ಟಿಸುತ್ತಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿರುತ್ತಾರೆ. ಮರಣೋತ್ತರ ಪರೀಕ್ಷೆ ಪ್ರಾಥಮಿಕ ವರದಿಯಲ್ಲಿ ಆಕೆ ಬೈಕ್ ಮೇಲಿಂದು ಬಿದ್ದು ಸತ್ತಿಲ್ಲ, ಉಸಿರು ಗಟ್ಟಿ ಸತ್ತಿರುವುದು ಗೊತ್ತಾಗುತ್ತದೆ. ಪೊಲೀಸರು ಮಾವ ಕಾಮಣ್ಣನನ್ನು ಕರೆದೊಯ್ದು ವಿಚಾರಣೆ ಮಾಡುತ್ತಾರೆ. ಈ ವೇಳೆ ತಾವೇ ಕೊಲೆ ಮಾಡಿದ್ದು ಎಂದು ಆತ ಒಪ್ಪಿಕೊಳ್ಳುತ್ತಾನೆ. ಅತ್ತೆ ಜಯಶ್ರೀಯನ್ನು ಕೂಡ ಪೊಲೀಸರು ಬಂಧಿಸುತ್ತಾರೆ. ರೇಣುಕಾಳ ಗಂಡ ಸಂತೋಷ್‌ನನ್ನು ಕೂಡ ಜೈಲಿಗೆ ಅಟ್ಟುತ್ತಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *