ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಮೂಲಕ ಜಿಲ್ಲೆಯ ಇತಿಹಾಸವನ್ನು ತಿರುಚಲಾಗುತ್ತಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಯವರು ಟೀಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅಲ್ಲಿನ ಜನರ ಜನಾಭಿಪ್ರಾಯವನ್ನು ಪಡೆದೇ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಕುಮಾರಸ್ವಾಮಿಯವರು ರಾಮನಗರ ಜಿಲ್ಲೆ ಸೃಜಿಸುವಾಗ ಅಲ್ಲಿನ ಇತಿಹಾಸದ ಬಗ್ಗೆ ಯೋಚಿಸಿರಲಿಲ್ಲವೇ ಎಂದು ಮರುಪ್ರಶ್ನಿಸಿದರು.
ಜಾರಿನಿರ್ದೇಶನಾಲಯ ತನ್ನ ಎಲ್ಲೆಯನ್ನು ಮೀರುತ್ತಿರುವ ಬಗ್ಗೆ ಸರ್ವೋಚ್ಛ ನ್ಯಾಯಾಲಯ ಗಮನಿಸಿರುವ ಕುರಿತು ಪತ್ರರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಇ.ಡಿ ಯವರು, ಐ.ಟಿ.ಯವರು ತನಿಖೆ ಮಾಡುವುದನ್ನೇ ಆಗಲಿ ಅಥವಾ ಕಪ್ಪು ಹಣ ವ್ಯವಹಾರವನ್ನು ಪತ್ತೆ ಹಚ್ಚುವುದನ್ನೇ ಆಗಲಿ ಆಕ್ಷೇಪಿಸುವುದಿಲ್ಲ. ಆದರೆ ಇ.ಡಿ ಮತ್ತು ಐ.ಟಿ ದಾಳಿಗಳು ರಾಜಕೀಯ ದುರುದ್ದೇಶದಿಂದ ನಡೆಯಕೂಡದು. ಪ್ರಸ್ತುತ ಗೃಹ ಸಚಿವ ಜಿ.ಪರಮೇಶ್ವರ ಅವರ ಶಿಕ್ಷಣ ಸಂಸ್ಥೇಯ ಮೇಲೆ ಇ.ಡಿ.ದಾಳಿ ರಾಜಕೀಯ ಪ್ರೇರಿತ. ಸುಪ್ರೀಂ ಕೋರ್ಟ್ ನವರು ಯಾವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ರೀತಿ ಅವಲೋಕಿಸಿದ್ದಾರೆ ಎಂದು ತೀರ್ಪು ಪರಿಶೀಲಿಸಿದ ನಂತರವಷ್ಟೇ ತಿಳಿಯಲಿದೆ ಎಂದರು.
ವರ್ಷದಿಂದ ಅಪರಾಧ ಪ್ರಕರಣಗಳು ಕಡಿಮೆ
ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡುತ್ತಾ, ಅಪರಾಧ ಪ್ರಕರಣಗಳ ವಿರುದ್ಧ ಕಠಿಣ ಕ್ರಮವಾಗುತ್ತದೆ. ಆದರೆ ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿದ್ದು, ಬಿಜೆಪಿ ಅವಧಿಗೆ ಹೋಲಿಸಿದರೆ ನಮ್ಮ ಸರ್ಕಾರದ ಅವಧಿಯಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಿದೆ. ಅಪರಾಧಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸರ್ಕಾರ ಖಂಡಿತ ಪ್ರಯತ್ನಿಸುತ್ತದೆ ಎಂದರು.
ಕೇಂದ್ರ ಸರ್ಕಾರ ಕೋವಿಡ್ ಎಚ್ಚರಿಕಾ ಕ್ರಮ ತೆಗೆದುಕೊಳ್ಳಲಿ
ಸಿಂಗಾಪುರ , ಹಾಂಕಾಂಗ್ ದೇಶದಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿದ್ದು, ವಿದೇಶದಿಂದ ಆಗಮಿಸುವವರ ಕೋವಿಡ್ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಯಾವುದೇ ಕ್ರಮ ವಹಿಸದೆ, ಇಲ್ಲಿಯೂ ಕೋವಿಡ್ ಪ್ರಕರಣಗಳು ಹೆಚ್ಚುವ ಸಾಧ್ಯತೆಯಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿರುವ ಸಂದರ್ಭ ದಲ್ಲಿ ಕೇಂದ್ರ ಸರ್ಕಾರ ಈ ಬಗ್ಗೆ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ತ್ವರಿತ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದರು.
ಯಂಗ್ ಇಂಡಿಯಾ ಸಂಸ್ಥೆಗೆ ದೇಣಿಗೆ ನೀಡಿರುವ ಬಗ್ಗೆ ಡಿಸಿಎಂ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ರವರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆಯಾಗಿರುವ ಬಗ್ಗೆ ಮಾತನಾಡಿ, ಯಾವುದೇ ಸಂಸ್ಥೆಗೆ ದೇಣಿಗೆ ನೀಡುವುದು ತಪ್ಪಲ್ಲ ಎಂದರು.