ಮುಂಬೈ: ಭಾರತ ತಂಡದ ವಿಶ್ವಕಪ್ ಹೀರೋ ಆಲ್ ರೌಂಡರ್ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜೀವ್ ಶುಕ್ಲ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವದ ಸಮಸ್ಯೆ ಹಿನ್ನೆಲೆಯಲ್ಲಿ 70 ವರ್ಷದ ರೋಜರ್ ಬಿನ್ನಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಬಿಸಿಸಿಐ ಉಪಾಧ್ಯಕ್ಷ ಹಾಗೂ ಐಪಿಎಲ್ ಚೇರ್ ಮನ್ ಆಗಿರುವ ರಾಜೀವ್ ಶುಕ್ಲ ಅವರನ್ನು ಹಂಗಾಮಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿದ್ದು, ಮುಂದಿನ ಪದಾಧಿಕಾರಿಗಳ ಚುನಾವಣೆವರೆಗೂ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂದು ಹೇಳಲಾಗಿದೆ.
ರಾಜೀವ್ ಶುಕ್ಲ ನೇತೃತ್ವದಲ್ಲಿ ಬುಧವಾರ ಬಿಸಿಸಿಐ ಪ್ರಾಯೋಜಕತ್ವ ವಿವಾದ ಕುರಿತು ಸಭೆ ನಡೆದಿದ್ದು, ಈ ಸಭೆಗೆ ರೋಜರ್ ಬಿನ್ನಿ ಗೈರು ಹಾಜರಾಗಿದ್ದರು. ಇದರಿಂದ ಬಿನ್ನಿ ರಾಜೀನಾಮೆ ವಿಷಯ ಬಹಿರಂಗಗೊಂಡಿದ್ದು, ಯಾವಾಗ ರಾಜೀನಾಮೆ ನೀಡಿದರು? ರಾಜೀನಾಮೆಗೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ.
ಇತ್ತೀಚೆಗೆ ಲೋಕಸಭೆಯಲ್ಲಿ ಕ್ರೀಡಾ ಸಂಸ್ಥೆಗಳಲ್ಲಿ 75 ವರ್ಷ ಮೇಲ್ಪಟ್ಟ ಪದಾಧಿಕಾರಿಗಳನ್ನು ಆಯ್ಕೆ ಮಾಡುವಂತಿಲ್ಲ ಎಂಬ ಕಾನೂನು ಮಂಡಿಸಿದ ಹಿನ್ನೆಲೆಯಲ್ಲಿ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯಬಹುದು ಎಂದು ಹೇಳಲಾಗಿತ್ತು.
ಬಿಸಿಸಿಐ ನೂತನ ವಯೋಮಿತಿ ಕಾನೂನು ಕುರಿತು ಅಧ್ಯಯನ ನಡೆಸುತ್ತಿರುವಾಗಲೇ ರೋಜರ್ ಬಿನ್ನಿ ರಾಜೀನಾಮೆ ನೀಡಿದ್ದಾರೆ.