ಹೆಂಡತಿ ಮನೆ ಬಿಟ್ಟು ಹೋದಳೆಂದು ಸಿಟ್ಟಿಗೆದ್ದ ಪತಿಯೊಬ್ಬ ಮದುವೆ ಬ್ರೋಕರ್ನನ್ನೇ ಹತ್ಯೆ ಮಾಡಿದ ಘಟನೆಮಂಗಳೂರು ನಗರ ಹೊರವಲಯದ ವಳಚಿಲ್‌ನಲ್ಲಿ ನಡೆದಿದೆ. ಸುಲೇಮಾನ್ (50) ಕೊಲೆಯಾದ ವ್ಯಕ್ತಿ, ಮುಸ್ತಫಾ (30) ಕೊಲೆ ಆರೋಪಿಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಸುಲೇಮಾನ್ ಅವರ ಪುತ್ರರಾದ ರಿಯಾಬ್ ಮತ್ತು ಸಿಯಾಬ್ ಗಾಯಗೊಂಡಿದ್ದಾರೆ.
ಮೃತ ಸುಲೇಮಾನ್, ವಿವಾಹ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದರು.ರೋಪಿ ಮುಸ್ತಫಾ ಎಂಬಾತನಿಗೆ ಮಹಿಳೆಯೊಂದಿಗೆ 8 ತಿಂಗಳ ಹಿಂದೆ ವಿವಾಹ ಮಾಡಿಸಿದ್ದರು. ಆ ಮಹಿಳೆಯು ಎರಡು ತಿಂಗಳ ಹಿಂದೆ ತವರು ಮನೆಗೆ ಮರಳಿದ್ದರು. ಇದರಿಂದ ಮುಸ್ತಫಾ ಮತ್ತು ಸುಲೇಮಾನ್ ನಡುವೆ ಒಡಕು ಉಂಟಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುಸ್ತಫಾ ಸುಲೇಮಾನ್‌ಗೆ ಕರೆ ಮಾಡಿ ಅವಾಚ್ಯ ಶಬ್ದಗಳಲ್ಲಿ ಬೈಯ್ದಿದ್ದಾನೆ. ಬಳಿಕ ಸುಲೇಮಾನ್ ಪುತ್ರರಾದ ರಿಯಾಬ್ ಮತ್ತು ಸಿಯಾಬ್ ಜೊತೆಗೆ ವಳಚಿಲ್‌ನಲ್ಲಿರುವ ಮುಸ್ತಫಾ ಮನೆಗೆ ಮಾತನಾಡಲು ತೆರಳಿದ್ದರು. ರಿಯಾಬ್ ಮತ್ತು ಸಿಯಾಬ್ ರಸ್ತೆಯ ಬದಿಯಲ್ಲಿ ಕಾಯುತ್ತಿದ್ದಾಗ, ಸುಲೇಮಾನ್ ಮುಸ್ತಫಾನ ಜೊತೆ ಮಾತನಾ ಡಲು ಹೋಗಿದ್ದರು. ಮಾತುಕತೆ ಫಲಕಾರಿಯಾಗದೆ ಹಿಂತಿರುಗಿ ಬರುವಾಗ ಮುಸ್ತಫಾ ಮನೆಯಿಂದ ಕೂಗುತ್ತಾ ಓಡಿ ಬಂದು ಚಾಕುವಿನಿಂದ ಸುಲೇಮಾನ್‌ರ ಕುತ್ತಿಗೆಯ ಬಲಭಾಗಕ್ಕೆ ಇರಿದಿದ್ದಾನೆ. ಗಾಯಗೊಂಡ ಸುಲೇಮಾನ್ ಸ್ಥಳದಲ್ಲೇ ಕುಸಿದಿದ್ದಾರೆ. ಬಳಿಕ ಮುಸ್ತಫಾ ರಿಯಾಬ್‌ನ ಬಲಗೈ ಮತ್ತು ಸಿಯಾಬ್‌ನ ಎದೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸುಲೇಮಾನ್ ಆಸ್ಪತ್ರೆಗೆ ತಲುಪುವ ಮುನ್ನವೇ ಮೃತಪಟ್ಟಿದ್ದಾರೆ. ರಿಯಾಬ್ ಮತ್ತು ಸಿಯಾಬ್ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆರೋಪಿ ಮುಸ್ತಫಾನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.