ದೆಹಲಿಯಿಂದ ಶ್ರೀನಗರಕ್ಕೆ ಹೊರಟಿದ್ದ ಇಂಡಿಗೋ ವಿಮಾನವು ಆಲಿಕಲ್ಲು ಮಳೆ ಸೇರಿದಂತೆ ಪ್ರತಿಕೂಲ ಹವಾಮಾನದ ಕಾರಣ ಪಾಕಿಸ್ತಾನದ ವಾಯು ಪ್ರದೇಶ ಪ್ರವೇಶಕ್ಕೆ ಅನುಮತಿ ಕೇಳಿದ್ದು, ಪಾಕ್ ಅನುಮತಿ ನೀಡಲಿಲ್ಲ. ವಿಮಾನಯಾನ ಸಂಸ್ಥೆಯ ಮಾಹಿತಿ ಪ್ರಕಾರ, ತೀವ್ರ ಪ್ರಕ್ಷುಬ್ಧತೆ ನಡುವೆಯೂ 227 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ.
ತುರ್ತು ಪರಿಸ್ಥಿತಿಯಲ್ಲಿ ಸಿಲುಕಿದ್ದ ಪೈಲಟ್ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಲು ಅನುಮತಿ ಕೇಳಿದ್ದರು, ಆದರೆ ಪಾಕಿಸ್ತಾನ ನಿರಾಕರಿಸಿದೆ. ಇಂಡಿಗೊದ 6E 2142 ವಿಮಾನವು ಶ್ರೀನಗರದ ಬಳಿ ಪ್ರತಿಕೂಲ ಹವಾಮಾನದಿಂದ ಪಾಕಿಸ್ತಾನದ ವಾಯುಪ್ರದೇಶವನ್ನು ಸ್ವಲ್ಪ ಸಮಯದವರೆಗೆ ಪ್ರವೇಶಿಸಲು ಲಾಹೋರ್ ವಾಯು ಸಂಚಾರ ನಿಯಂತ್ರಣದಿಂದ ಅನುಮತಿ ಕೋರಿದ್ದರು. ಆದರೆ ವಿನಂತಿಯನ್ನು ತಿರಸ್ಕರಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಶ್ರೀನಗರ ಬಳಿ ವಿಮಾನ ಸಂಚಾರವು ಪ್ರಕ್ಷುಬ್ಧತೆಗೆ ಸಿಲುಕಿ ಪ್ರಯಾಣಿಕರು ಭಯಭೀತರಾದರು. ವಿಮಾನವು ತೀವ್ರವಾಗಿ ಅಲುಗಾಡಲು ಆರಂಭಿಸಿದಂತೆ ಪ್ರಯಾಣಿಕರು ಪ್ರಾರ್ಥಿಸುತ್ತಿರುವುದು ವೀಡಿಯೊಗಳಲ್ಲಿ ಕಾಣಿಸುತ್ತಿದೆ. ವಿಮಾನದಲ್ಲಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ಸಾಗರಿಕಾ ಘೋಷ್ ಸೇರಿ ಪಕ್ಷದ ಇತರ ನಾಲ್ವರು ನಾಯಕರು ಇದ್ದರು. ಸಾವಿನ ಸಮೀಪ ಹೋಗಿ ವಾಪಸ್ ಬಂದಂತಹ ಅನುಭವವಾಗಿತ್ತು. ಜನರು ಕಿರುಚುತ್ತಿದ್ದರು ಮತ್ತು ಪ್ರಾರ್ಥಿಸುತ್ತಿದ್ದರು. ನಮ್ಮನ್ನು ಸುರಕ್ಷಿತವಾಗಿ ಹೊರತಂದ ಪೈಲಟ್ಗೆ ಧನ್ಯವಾದ, ನಾವು ಇಳಿದಾಗ ವಿಮಾನದ ಮುಂಭಾಗ ಮುರಿದಿತ್ತು ಎಂದು ಹೇಳಿದ್ದಾರೆ.