Menu

ರುದ್ರಪ್ರಯಾಗದಲ್ಲಿ ಭೀಕರ ಮಳೆ: ಹಲವರು ನಾಪತ್ತೆ, ಅವಶೇಷಗಳಡಿ ಸಿಲುಕಿರುವ ಭೀತಿ

ಉತ್ತರಾಖಂಡದ ರುದ್ರಪ್ರಯಾಗ ಮತ್ತು ಚಮೋಲಿ ಜಿಲ್ಲೆಗಳ ಹಲವೆಡೆ ಮೇಘಸ್ಫೋಟ ಸಂಭವಿಸಿ, ಹಲವಾರು ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಲ್ಲದೆ ಎರಡರಿಂದ ಮೂರು ಕುಟುಂಬ ನಾಪತ್ತೆಯಾಗಿವೆ. ಅವಶೇಷಗಳಡಿ ಸಿಲುಕಿ ದಂಪತಿ ಮೃತಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿವೆ, ರಸ್ತೆಗಳು ಬಂದ್ ಆಗಿವೆ.

ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ನಡೆಯುತ್ತಿದೆ. 200 ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಎರಡರಿಂದ ಮೂರು ಕುಟುಂಬಳ ನಾಪತ್ತೆಯಾಗಿದ್ದು ಹುಡುಕಾಟ ನಡೆಯುತ್ತಿದೆ. ರಕ್ಷಣಾ ಕಾರ್ಯಾಚರಣೆಗೆ ಸೇನೆಯು 12 ಹೆಲಿಕಾಪ್ಟರ್‌ಗಳನ್ನು ಬಳಸುತ್ತಿದೆ, ಸಂತ್ರಸ್ತರಿಗೆ ಆಹಾರ ಮತ್ತು ವೈದ್ಯಕೀಯ ನೆರವು ನೀಡಲಾಗುತ್ತಿದೆ.

ಈ ಹಿಂದೆ ಚಮೋಲಿಯಲ್ಲಿ ಮಳೆಯಿಂದಾಗಿ ಥರಲಿ ಮಾರುಕಟ್ಟೆ ಮತ್ತು ತಹಸಿಲ್ ಕಚೇರಿ ಸಂಕೀರ್ಣದ ಭಾಗಗಳು ಕುಸಿದು ಬಿದ್ದಿದ್ದವು. ರುದ್ರಪ್ರಯಾಗದಲ್ಲಿ ಕಟ್ಟಡ ಕುಸಿದು ಅವಶೇಷಗಳಡಿ ಸಿಲುಕಿದ್ದ ಜನರನ್ನು ರಕ್ಷಣಾ ತಂಡವು ರಕ್ಷಿಸುತ್ತಿದೆ. ಸಂತ್ರಸ್ತರಿಗೆ ಪರಿಹಾರ ನೀಡಲು ಕ್ರಮ ಕೈಗೊಂಡಿದೆ.

ಜನರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಸ್ಥಳೀಯ ಆಡಳಿತವು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಎಲ್ಲರೂ ಸುರಕ್ಷಿತವಾಗಿರಲಿ ಎಂದು ಬಾಬಾ ಕೇದಾರ್ ಅವರನ್ನು ಪ್ರಾರ್ಥಿಸುತ್ತೇನೆ ಎಂದು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ.

ಮಂದಾಕಿನಿ ನದಿಯ ನೀರಿನ ಮಟ್ಟ ಏರಿಕೆಯಾಗಿದೆ, ವಾಸು ಕೇದಾರ ಪ್ರದೇಶಗಳಲ್ಲೂ ಮೇಘಸ್ಫೋಟ ಸಂಭವಿಸಿದೆ. 70-80 ಜನರನ್ನು ಸ್ಥಳಾಂತರಿಸಿಸಲಾಗಿದೆ ಎಂದು ಎಸ್‌ಪಿ ಅಕ್ಷಯ್ ಪ್ರಹ್ಲಾದ್ ಕೊಂಡೆ ತಿಳಿಸಿದ್ದಾರೆ. ಚೆನಗರ್ಹ್‌ನ ಮಾರುಕಟ್ಟೆ ಪ್ರದೇಶದಲ್ಲಿ ಸ್ವಲ್ಪ ಹಾನಿಯಾಗಿದೆ. ಎಂಟು ಕಾರ್ಮಿಕರು ಅವಶೇಷಗಳ ಅಡಿ ಸಿಲುಕಿರುವ ಸಾಧ್ಯತೆಯಿದ್ದು, ಅದರಲ್ಲಿ 4 ನೇಪಾಳಿಗಳು ಮತ್ತು 4 ಸ್ಥಳೀಯರು, ಹಲವೆಡೆ ಮಲೆಯ ತೀವ್ರತೆಗೆ ರಸ್ತೆಗಳು ಹಾನಿಗೊಂಡಿದ್ದು, ಹಾನಿ ಸಂಭವಿಸಿದ ಸ್ಥಳಕ್ಕೆ ರಕ್ಷಣಾ ಪಡೆ ತಲುಪಲು ತಡವಾಗಿ ಕಾರ್ಯಕ್ಕೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ.

ಜಮ್ಮುವಿನಲ್ಲಿ ಧಾರಾಕಾರ ಸುರಿಯುತ್ತಿರುವ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಿಮಾಚಲ ಪ್ರದೇಶದಲ್ಲಿ ರಸ್ತೆಗಳು ಜಲಾವೃತಗೊಂಡಿದೆ. ಹಿಮಾಚಲದ ಚಂಬಾ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮಣಿಮಹೇಶ್ ಯಾತ್ರೆಗೆ ಹೋಗಿದ್ದ 7,000-8,000 ಯಾತ್ರಾರ್ಥಿಗಳು ಪ್ರವಾಹದಲ್ಲಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಹಿಮಾಚಲ ಪ್ರದೇಶದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ ಸೇರಿ 524 ರಸ್ತೆಗಳು ಬಂದ್ ಆಗಿವೆ. 1,230 ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಹಾಳಾಗಿವೆ. 416 ನೀರಿನ ಸರಬರಾಜು ಯೋಜನೆಗಳು ಸ್ಥಗಿತಗೊಂಡಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.

Related Posts

Leave a Reply

Your email address will not be published. Required fields are marked *