Menu

ಕೃಷಿ ಸಚಿವರ ತವರಲ್ಲಿ ಭೂ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು

ಕೃಷಿ ಸಚಿವ ಎನ್. ಚಲುವರಾಯಸ್ವಾಮಿಯ ತವರು ಕ್ಷೇತ್ರ ನಾಗಮಂಗಲ ತಾಲೂಕಿನ ದೇವರಮಲ್ಲನಾಯಕನಹಳ್ಳಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅರ್ಹ ಫಲಾನುಭವಿಗೆ ಬದಲು ಇನ್ನೊಬ್ಬನ ಹೆಸರಿಗೆ 3 ಎಕರೆ ಜಮೀನನ್ನು ಮಂಜೂರು ಮಾಡಿದ್ದ ಆರೋಪದಡಿ ನಾಲ್ವರು ಕಂದಾಯ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಆದರ್ಶ ಭೂ ಮಂಜೂರು ಪ್ರಕ್ರಿಯೆಯನ್ನು ಕೈಗೊಂಡಾಗ ನಕಲಿ ದಾಖಲೆಗಳ ಮೂಲಕ ರಾಜಲಿಂಗಯ್ಯ ಎಂಬವರ ಹೆಸರಿಗೆ ಜಮೀನು ಮಂಜೂರು ಮಾಡಲಾಗಿದೆ. ಈ ಜಮೀನು ನೈಜವಾಗಿ ನಂಜೇಗೌಡ ಎಂಬವರಿಗೆ ಮಂಜೂರಾಗಬೇಕಿತ್ತು. ಆದರೆ ಅಧಿಕಾರಿಗಳು ಲಂಚ ಪಡೆದು, ಬೇರೊಬ್ಬರ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿ ಹಣ ಕೊಟ್ಟವರ ಹೆಸರಿಗೆ ಭೂಮಿ ಮಂಜೂರು ಮಾಡಿದ್ದಾರೆ. ಆದರ್ಶ ಭೂ ಮಂಜೂರು ಯೋಜನೆಯಲ್ಲಿ ಅಕ್ರಮವೆಸಗಿ ಸರ್ಕಾರದ ನಂಬಿಕೆಗೆ ಧಕ್ಕೆ ತಂದಿದ್ದಾರೆ ಎಂದು ಹೇಳಲಾಗಿದೆ.
ಈ ಅಕ್ರಮದ ಬಗ್ಗೆ ನರಸಿಂಹಮೂರ್ತಿ ಎಂಬವರು ನೀಡಿದ ದೂರು ಆಧರಿಸಿ ತನಿಖೆ ನಡೆಸಿದಾಗ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ನಕಲಿ ದಾಖಲೆಗಳ ಸೇರ್ಪಡೆ ಸೇರಿದಂತೆ ಸಾಕಷ್ಟು ಅಕ್ರಮಗಳು ಬೆಳಕಿಗೆ ಬಂದಿವೆ. ತನಿಖೆಯಲ್ಲಿ ತಪ್ಪು ಸಾಬೀತಾದ ಕಾರಣ ನಾಲ್ವರು ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪ್ರಾದೇಶಿಕ ಆಯುಕ್ತರ ಆದೇಶದನ್ವಯ ಉಪ ತಹಸಿಲ್ದಾರ್ ಪ್ರಸನ್ನಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಉಳಿದ ಮೂರು ಅಧಿಕಾರಿಗಳನ್ನು ಮಂಡ್ಯ ಜಿಲ್ಲಾಧಿಕಾರಿ ಅಮಾನತು ಮಾಡಿದ್ದಾರೆ.
ಪ್ರಸನ್ನಕುಮಾರ್– ಉಪ ತಹಸೀಲ್ದಾರ್, ಶಶಿಧರ್– ರಾಜಸ್ವ ನಿರೀಕ್ಷಕ, ಗಣೇಶ್– ರಾಜಸ್ವ ನಿರೀಕ್ಷಕ, ಕರ್ಣ– ಗ್ರಾಮ ಆಡಳಿತಾಧಿಕಾರಿ ಅಮಾನತುಗೊಂಡವರು. ಗ್ರಾಮೀಣ ಭಾಗದ ಭೂ ಹಕ್ಕು ಮತ್ತು ಜಮೀನಿನ ಮಂಜೂರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ಅಗತ್ಯವಿದ್ದರೆ ಇನ್ನಷ್ಟು ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.
ಮಂಡ್ಯ ನಿರ್ಮಿತಿ ಕೇಂದ್ರದಲ್ಲಿ ನಕಲಿ ಪ್ರಮಾಣಪತ್ರದ ಆಧಾರದಲ್ಲಿ ಉದ್ಯೋಗ ಪಡೆದವರ ಕುರಿತು ಗಂಭೀರ ತನಿಖೆ ನಡೆದಿದ್ದು, ಸರ್ಕಾರ ಇದೀಗ ರಾಜ್ಯದ ಎಲ್ಲಾ ಜಿಲ್ಲೆಗಳ ನಿರ್ಮಿತಿ ಕೇಂದ್ರಗಳ ನೇಮಕಾತಿ ಪ್ರಕ್ರಿಯೆ ಪರಿಶೀಲನೆಗೆ ಆದೇಶ ಹೊರಡಿಸಿದೆ. ಮಂಡ್ಯ ನಿರ್ಮಿತಿ ಕೇಂದ್ರದಲ್ಲಿ ನಕಲಿ ದಾಖಲೆಗಳ ಮೂಲಕ ಉದ್ಯೋಗ ಪಡೆದ ನಾಲ್ವರು ಅಧಿಕಾರಿಗಳನ್ನು ಈಗಾಗಲೇ ಸೇವೆಯಿಂದ ವಜಾಗೊಳಿಸಲಾಗಿದೆ. ಇವರಲ್ಲಿ ಮಾಜಿ ಯೋಜನಾ ನಿರ್ದೇಶಕ ವಿನೋದ್, ಸೈಟ್ ಇಂಜಿನಿಯರ್‌ಗಳಾದ ಬಿ.ಎಲ್. ವೇಣುಗೋಪಾಲ್, ಪ್ರಶಾಂತ್ ಹಾಗೂ ಇಂಜಿನಿಯರ್ ಶ್ರೀಧರ್ ಇದ್ದಾರೆ.

Related Posts

Leave a Reply

Your email address will not be published. Required fields are marked *