Menu

ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವಕ್ಕೆ ಮಳೆಯಲ್ಲೂ ಜನ ಸಾಗರ

ಕೊಪ್ಪಳ  ತಾಲೂಕಿನ ಹುಲಿಗೆ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಮಹಾರಥೋತ್ಸವವು  ಅಪಾರ ಜನ ಸಾಗರದ ನಡುವೆ ವಿಜೃಂಭಣೆಯಿಂದ ನೆರವೇರಿತು.  ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಪ್ರಸಕ್ತ ಸಾಲಿನ ಜಾತ್ರಾ ಮಹೋತ್ಸವದ ಅಂಗವಾಗಿ ಮೇ 24ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಮಹಾರಥೋತ್ಸವವು ಬುಧವಾರ ಸಾಯಂಕಾಲ 5-30 ಗಂಟೆಗೆ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು.  ಮಳೆಯ ನಡುವೆಯೂ ಮಹಾರಥೋತ್ಸವಕ್ಕೆ ಭಕ್ತರು ಸಾಗರದಂತೆ ಹರಿದು ಬಂದಿರುವುದು ವಿಶೇಷವಾಗಿತ್ತು.

ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವದಲ್ಲಿ ಭಕ್ತರ ಉಧೋ ಉಧೋ ಘೋಷಣೆ ಮುಗಿಲು ಮುಟ್ಟಿತ್ತು. ಭಕ್ತವೃಂದ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಸಮರ್ಪಿಸಿ, ಭಕ್ತಿ ಭಾವ ಮೆರೆದರು. ಕರ್ನಾಟಕವಲ್ಲದೆ  ಆಂದ್ರಪ್ರದೇಶದ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳ ಸೇರಿದಂತೆ ಲಕ್ಷಾಂತರ ಭಕ್ತಾದಿಗಳು  ಆಗಮಿಸಿ, ಮಹಾರಥೋತ್ಸವವನ್ನು ಕಣ್ತುಂಬಿಕೊಂಡರು. ರಥವು ಪಾಜಕಟ್ಟಿ ವರೆಗೆ ಹೋಗಿ ದೇವಸ್ಥಾನ ಬಳಿ ಮರಳುತ್ತಿದ್ದಂತೆ‌ ಎಲ್ಲರ ಸಂಭ್ರಮ  ಮುಗಿಲು ಮುಟ್ಟಿತ್ತು.

ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯು ಭಕ್ತಾದಿಗಳಿಗೆ ಕುಡಿಯುವ ನೀರು, ಶೌಚಾಲಯ, ಸ್ನಾನ ಗೃಹ, ಸಾರಿಗೆ ಮತ್ತು ವಾಹನಗಳ ಪಾರ್ಕಿಂಗ್ ವ್ಯವಸ್ಥೆಗಳನ್ನು ಕಲ್ಪಿಸಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದೆ. ಈ ಬಾರಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಪ್ರತಿನಿತ್ಯ ಪ್ರಸಾದದ ವ್ಯವಸ್ಥೆಯನ್ನು  ಉತ್ತಮ ರೀತಿಯಲ್ಲಿ ಮಾಡಲಾಗಿದೆ.

ರಥೋತ್ಸವ ಸಂದರ್ಭದಲ್ಲಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಮಾಜಿ ಸಂಸದ ಕರಡಿ ಸಂಗಣ್ಣನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ ಕುಮಾರ್, ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಹೆಚ್.ಪ್ರಕಾಶ್‌ರಾವ್ ಕೊಪ್ಪಳ ಮತ್ತು ಗಂಗಾವತಿ ಡಿವೈಎಸ್‌ಪಿಗಳು, ಇತರೆ ಜನಪ್ರತಿನಿಧಿಗಳು ಹಾಗೂ ಇತರರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತವೃಂದ ರಥೋತ್ಸವ ಯಶಸ್ವಿಗೆ ಸಾಕ್ಷಿಯಾದರು.

Related Posts

Leave a Reply

Your email address will not be published. Required fields are marked *