Menu

ಇಡಿ ಅಧಿಕಾರಿಗಳಿಂದ ಮುಂದುವರಿದ ಸಚಿವ ಪರಮೇಶ್ವರ್‌ ಸಂಸ್ಥೆಗಳ ದಾಖಲೆ ಪರಿಶೀಲನೆ

ಇಡಿ ಅಧಿಕಾರಿಗಳು ಯಾವುದೇ ಮಾಹಿತಿ ಕೇಳಿದರೂ ನೀಡುವಂತೆ ನಮ್ಮ ಸಿಬ್ಬಂದಿಗೆ ತಿಳಿಸಿದ್ದೇನೆ, ಇಡಿ ದೆಹಲಿಯ ಅಧಿಕಾರಿಗಳು ನಮ್ಮ ಮೂರು ಕಾಲೇಜುಗಳಿಗೆ ಭೇಟಿ ಕೊಟ್ಟಿದ್ದಾರೆ. ಅವರಿಗೆ ಏನು ಸೂಚನೆ ಬಂದಿದೆಯೋ ಗೊತ್ತಿಲ್ಲ. ಅವರು ಕೇಳಿದ ದಾಖಲೆಗಳನ್ನು ನಾವು ಕೊಡುತ್ತೇವೆ. ಸಹಕಾರ ನೀಡುತ್ತೇನೆ. ಯಾವುದನ್ನು ಮುಚ್ಚಿಟ್ಟಿಲ್ಲ. ಕಾನೂನಿಗೆ ಗೌರವ ಕೊಡುತ್ತೇನೆ ಸಚಿವ ಪರಮೇಶ್ವರ್‌ ಹೇಳಿದ್ದಾರೆ.

ಪರಮೇಶ್ವರ್ ಒಡೆತನದ ತುಮಕೂರಿನ ಹೆಗ್ಗೆರೆಯಲ್ಲಿರುವ ಸಿದ್ದಾರ್ಥ ಮೆಡಿಕಲ್ ಕಾಲೇಜು, ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು ಮತ್ತು ನೆಲಮಂಗಲದ ಟಿ. ಬೇಗೂರು ಬಳಿ ಇರುವ ಮೆಡಿಕಲ್ ಕಾಲೇಜುಗಳ ಮೇಲೆ ಇಡಿ ದಾಳಿ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು. ಸತತ 14 ಗಂಟೆಗಳ ಕಾಲ 7 ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಗುರುವಾರವೂ ಮುಂಜಾನೆ 6 ಗಂಟೆಯಿಂದಲೇ ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಬುಧವಾರ ಸಚಿವ ಜಿ.ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆಸಿದ್ದು, ಎಚ್.ಎಮ್.ಎಸ್ ಕಾಲೇಜಿನ ಕ್ರಯಪತ್ರವನ್ನು ವಶಕ್ಕೆ ಪಡಿಸಿಕೊಂಡ ಅಧಿಕಾರಿಗಳು, ಶೋಧಕಾರ್ಯವನ್ನು ಮುಂದುವರಿಸಿದ್ದಾರೆ. ಅಧಿಕಾರಿಗಳ ತಂಡ ಕಾಲೇಜಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದೆ. ತುಮಕೂರಿನಲ್ಲಿರುವ ತಾಂತ್ರಿಕ ಕಾಲೇಜಿನಲ್ಲಿ ಶೋಧ ನಡೆಸಿದ ಅಧಿಕಾರಿಗಳಿಗೆ ಆಸ್ತಿಯ ಕ್ರಯಪತ್ರ ಸಿಕ್ಕಿದೆ ಎನ್ನಲಾಗಿದೆ. ಜಿ ಪರಮೇಶ್ವರ್ ಮಾಜಿ ಶಾಸಕ ಶಫಿ ಅಹ್ಮದ್‌ರಿಂದ ಎಚ್.ಎಮ್.ಎಸ್ ಕಾಲೇಜು ಖರೀದಿಸಿದ್ದರು. 95 ಕೋಟಿ ರೂ. ಗೆ ಖರೀದಿ ಮಾಡಿದ್ದಾರೆ ಎಂದು ಕ್ರಯಪತ್ರದಲ್ಲಿ ನಮೂದಿಸಿದ್ದರೂ ಅಸಲಿಗೆ 140 ಕೋಟಿ ರೂ.ಗೆ ವ್ಯವಹಾರ ನಡೆದಿದೆ. ಪರಮೇಶ್ವರ್ ಸಂದಾಯ ಮಾಡಿದ್ದ ಹಣ ದುಬೈನಲ್ಲಿ ಇದ್ದ ಶಫಿ ಅಹ್ಮದ್ ಅವರ ಸಂಬಂಧಿ ಚಿನ್ನದ ವ್ಯಾಪಾರಿಗೆ ತಲುಪಿದೆ ಎನ್ನಲಾಗಿದೆ.

ರನ್ಯಾ ರಾವ್‌ಗೂ ಈ ವ್ಯವಹಾರಕ್ಕೂ ನಂಟಿದೆಯಾ ಎಂಬ ಆಯಾಮದಲ್ಲಿ ಇಡಿ ಅಧಿಕಾರಿಗಳು ತನಿಖೆ ಶುರುಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ತುಮಕೂರು ನಗರದ ಪ್ರತಿಷ್ಠಿತ ಬಂಡಿಮನೆ ಕಲ್ಯಾಣಮಂಟಪವನ್ನೂ ಪರಮೇಶ್ವರ್ ಖರೀದಿಸಿದ್ದಾರೆ. ಎಸ್ ಮಾಲನ್ನೂ ಖರೀದಿ ಮಾಡುವ ಬಗ್ಗೆ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ. ಅಧಿಕಾರಿಗಳು ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ. ಮೆಡಿಕಲ್ ಸೀಟ್ ಬ್ಲಾಕಿಂಗ್ ದಂಧೆ ಕೂಡ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ನಡೆಯುತ್ತಿದೆ ಎಂಬ ಆರೋಪದಡಿಯೂ ಶೋಧ ನಡೆದಿದೆ.

Related Posts

Leave a Reply

Your email address will not be published. Required fields are marked *