Menu

ಉಗ್ರರ ವಿರುದ್ಧ ಜಾಗತಿಕ ಪ್ರಚಾರಕ್ಕೆ ಶಶಿ ತರೂರ್ ನೇತೃತ್ವದ 7 ಸಂಸದ ನಿಯೋಗ ರಚನೆ: ಕಾಂಗ್ರೆಸ್ ಆಕ್ಷೇಪ

shashi taroor

ನವದೆಹಲಿ: ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಿ ಉಗ್ರರ ವಿರುದ್ಧ ಹೋರಾಟ ಬಣ್ಣಿಸಲು ಕೇಂದ್ರ ಸರ್ಕಾರ 7 ಸಂಸದರ ನಿಯೋಗ ರಚಿಸಿದ್ದು, ಕಾಂಗ್ರೆಸ್ ನ ಸಂಸದ ಶಶಿ ತರೂರ್ ಗೆ ಪ್ರಮುಖ ಜವಾಬ್ದಾರಿ ವಹಿಸಿ ಅಚ್ಚರಿ ಮೂಡಿಸಿದೆ.

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರ ಹತ್ಯೆಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಪಾಕಿಸ್ತಾನದ 9 ವಾಯುನೆಲೆಗಳ ಮೇಲೆ ದಾಳಿ ನಡೆಸಿ ಉಗ್ರರಿಗೆ ಕುಮ್ಮಕ್ಕು ನೀಡಿದ್ದಕ್ಕೆ ತಕ್ಕ ಉತ್ತರ ನೀಡಿತ್ತು.

ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಭಾರತ ಜಾಗತಿಕ ಮಟ್ಟದಲ್ಲಿ ಸ್ವದೇಶೀ ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿತ್ತು. ಇದೀಗ ಉಗ್ರರ ವಿರುದ್ಧದ ತಮ್ಮ ಕಾರ್ಯಾಚರಣೆಯನ್ನು ಜಗತ್ತಿಗೆ ಮುಟ್ಟಿಸಲು 7 ಸಂಸದರ ನಿಯೋಗವನ್ನು ಕೇಂದ್ರ ಸರ್ಕಾರ ರಚಿಸಿದೆ.

ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಭಾರತದ “ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ಸಂದೇಶ”ಹೊತ್ತು 7 ಸಂಸದರ ಸರ್ವ ಪಕ್ಷ ನಿಯೋಗ  ಶೀಘ್ರದಲ್ಲೇ ಪ್ರಮುಖ ರಾಷ್ಟ್ರಗಳಿಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ರಾಜಕೀಯವನ್ನು ಮೀರಿ, ಭಿನ್ನಾಭಿಪ್ರಾಯಗಳನ್ನು ಮೀರಿ ರಾಷ್ಟ್ರೀಯ ಏಕತೆಯ ಪ್ರಬಲ ಪ್ರತಿಬಿಂಬ ಇದು ಎಂದು ಎಕ್ಸ್​​​ನಲ್ಲಿ ಹೇಳಿಕೊಂಡಿದ್ದಾರೆ. ಈ ಸರ್ವಪಕ್ಷ ನಿಯೋಗದಲ್ಲಿ ಮಾಜಿ ರಾಜತಾಂತ್ರಿಕರಾಗಿರುವ ಶಶಿ ತರೂರ್, ಕೇಂದ್ರವು ವಿರೋಧ ಪಕ್ಷದ ನಾಯಕರಾದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದೆ ಕನಿಮೋಳಿ ಕರುಣಾನಿಧಿ ಮತ್ತು ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ ಪ್ರಮುಖರಾಗಿ ಕೆಲಸ ಮಾಡಲಿದ್ದಾರೆ. ಈ ನಿಯೋಗಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರನ್ನು ಭೇಟಿ ಮಾಡಲಿವೆ ಎಂದು ತಿಳಿಸಿದ್ದಾರೆ.

ನಿಯೋಗದಲ್ಲಿ ಬಿಜೆಪಿ ನಾಯಕ ನಿಶಿಕಾಂತ್ ದುಬೆ, ಬಾನ್ಸುರಿ ಸ್ವರಾಜ್, ಅನುರಾಗ್ ಠಾಕೂರ್, ಎಂಜೆ ಅಕ್ಬರ್, ಸಾಮಿಕ್ ಭಟ್ಟಾಚಾರ್ಯ, ದಗ್ಗುಬಾಟಿ ಪುರಂದೇಶ್ವರಿ ಮತ್ತು ಎಸ್‌ಎಸ್ ಅಹ್ಲುವಾಲಿಯಾ ಇರಲಿದ್ದಾರೆ.

ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ , ಕಾಂಗ್ರೆಸ್ ನಾಯಕರಾದ ಸಲ್ಮಾನ್ ಖುರ್ಷಿದ್ ಮತ್ತು ಮನೀಶ್ ತಿವಾರಿ, ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷದ ಗುಲಾಮ್ ನಬಿ ಆಜಾದ್, ಶಿವಸೇನೆ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ, ಬಿಜು ಜನತಾದಳದ ಸಸ್ಮಿತ್ ಪಾತ್ರ, ಆಮ್ ಆದ್ಮಿ ಪಕ್ಷದ ವಿಕ್ರಮ್‌ಜೀತ್ ಸಾಹ್ನಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಸಂಸದ ಜಾನ್ ಬ್ರಿಟ್ಟಾಸ್ ಸ್ಥಾನ ಪಡೆದಿದ್ದಾರೆ.

ಆಪರೇಷನ್ ಸಿಂಧೂರ್ ನಂತರ ಕೇಂದ್ರ ಸರ್ಕಾರವನ್ನು ಹೊಗಳಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್, ತಮ್ಮ ಪಕ್ಷದಲ್ಲೇ ಟೀಕೆಗೆ ಒಳಗಾಗಿದ್ದರು. ಇದೀಗ ಅವರು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಭಾರತದ ಬಲವಾದ ಸಂದೇಶವನ್ನು ಜಗತ್ತಿಗೆ ಸಾರಲು ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಲಿದ್ದಾರೆ.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಶಿಬಿರಗಳ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ್ ನಂತರ ನಡೆಯುತ್ತಿರುವ ಪ್ರಮುಖ ಸಂಪರ್ಕ ಕಾರ್ಯಾಚರಣೆಯನ್ನು ಕೈಗೊಳ್ಳಲು ಸರ್ಕಾರ ಶನಿವಾರ ತರೂರ್ ಮತ್ತು ವಿರೋಧ ಪಕ್ಷದ ಇಬ್ಬರು ಮತ್ತು ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ನಾಲ್ವರು ಸೇರಿದಂತೆ ಆರು ಇತರ ಸಂಸದರನ್ನುಈ ನಿಯೋಗದಲ್ಲಿ ಹೆಸರಿಸಿದೆ .

ನಿಯೋಗಕ್ಕೆ ಪಕ್ಷದ ನಾಲ್ವರ ಹೆಸರನ್ನು ಸೂಚಿಸುವಂತೆ ಕೇಂದ್ರ ಮನವಿ ಮಾಡಿತ್ತು. ಕಾಂಗ್ರೆಸ್ ಶಶಿ ತರೂರ್ ಹೆಸರು ಹೊರತುಪಡಿಸಿದ ನಾಲ್ವರು ಸಂಸದರನ್ನು ಹೆಸರಿಸಿತ್ತು. ಆದರೆ ಶಿಫಾರಸು ಮಾಡದ ಶಶಿ ತರೂರ್ ಅವರನ್ನು ನೇಮಕ ಮಾಡಿರುವುದು ಕಾಂಗ್ರೆಸ್ ಅಸಮಾಧಾನಕ್ಕೆ ಕಾರಣವಾಗಿದೆ.

Related Posts

Leave a Reply

Your email address will not be published. Required fields are marked *