Menu

ದಕ್ಷಿಣ ಕನ್ನಡ ಜಿಲ್ಲೆ ಸದ್ಯದಲ್ಲೇ ಪೋಡಿಮುಕ್ತ ಜಿಲ್ಲೆ ಆಗಲಿದೆ: ಸಿಎಂ ಸಿದ್ದರಾಮಯ್ಯ

ಮಂಗಳೂರು: ನಾನೇ ಗುದ್ದಲಿಪೂಜೆ ಮಾಡಿದ ಪ್ರಜಾಸೌಧದ ಕಟ್ಟಡವನ್ನು ನಾನೇ ಉದ್ಘಾಟಿಸಿದ್ದೇನೆ. ಮಾಜಿ ಸಚಿವ ರಮಾನಾಥ ರೈ ಅವರ ಕಾಳಜಿಯಿಂದ ಪ್ರಜಾಸೌಧ ಕಟ್ಟಡಕ್ಕೆ ನಾನೇ ಗುದ್ದಲಿಪೂಜೆ ಮಾಡಿದ್ದೆ. ಈಗ ನಾನೇ ಉದ್ಘಾಟಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಪ್ರಜಾಸೌಧ ಕಟ್ಟಡವನ್ನು ಪ್ರಜಾರ್ಪಣೆಗೊಳಿಸಿ ಮಾತನಾಡಿದರು.

ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಗುದ್ದಲಿ ಪೂಜೆ ನೆರವೇರಿಸಿ ಮೊದಲ ಹಂತದ ಕಾಮಗಾರಿಗೆ ಹಣ ಬಿಡುಗಡೆ ಮಾಡಿದ್ದೆವು. ಬಿಜೆಪಿ ನಾಲ್ಕು ವರ್ಷ ಅಧಿಕಾರದಲ್ಲಿದ್ದಾಗ ಪ್ರಜಾಸೌಧದ ಕೆಲಸ ನಿಂತು ಹೋಗಿತ್ತು. ಬಿಜೆಪಿ ಸರ್ಕಾರದಲ್ಲಿ ಕಾಮಗಾರಿ ಮುಂದುವರೆಯಲೇ ಇಲ್ಲ. ಇದನ್ನು ಪೂರ್ಣಗೊಳಿಸಲು ಮತ್ತೆ ನಾವೇ ಅಧಿಕಾರಕ್ಕೆ ಬರಬೇಕಾಯಿತು. ಬಿಜೆಪಿ ಅವಧಿಯಲ್ಲಿ ಉದ್ಘಾಟನೆ ಆಗಲಿಲ್ಲ ಏಕೆ ಎಂದು ವೇದಿಕೆಯಲ್ಲೇ ಇದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.

ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 4.5 ಲಕ್ಷ ಕೋಟಿ ತೆರಿಗೆ ಕೊಡ್ತೀವಿ. ಕೇಂದ್ರ ರಾಜ್ಯಕ್ಕೆ ವಾಪಾಸ್ ಕೊಡುವುದು, ಸ್ಮಾರ್ಟ್ ಸಿಟಿ ಯೋಜನೆ ಸೇರಿ ಕೇವಲ 65 ಸಾವಿರ ಕೋಟಿ. ಶೇ15-16 ರಷ್ಟು ಮಾತ್ರ ವಾಪಾಸ್ ಕೊಡುತ್ತಿದೆ. ಇದು ಕೇಂದ್ರ ನಮ್ಮ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಅಲ್ಲವೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು , ಪ್ರಧಾನಿ ಮೋದಿಯವರಿಗೆ ಹೇಳಿ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ನಿಲ್ಲಿಸಿ ಎಂದು ಶಾಸಕ ಕಾಮತ್ ಅವರಿಗೆ ಕಿವಿ ಮಾತು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆ ಸದ್ಯದಲ್ಲೇ ಪೋಡಿಮುಕ್ತ ಜಿಲ್ಲೆ ಆಗಲಿದೆ.‌ ಸಚಿವ ಕೃಷ್ಣಬೈರೇಗೌಡರು ವಿಶೇಷ ಕಾಳಜಿ, ಸಾಕಷ್ಟು ಶ್ರಮ ವಹಿಸಿ ಜಿಲ್ಲೆಯನ್ನು ಪೋಡಿಮುಕ್ತ ಮಾಡುವ ದಿಕ್ಕಿನಲ್ಲಿ ಕೆಲಸಗಳು ಆಗಿವೆ ಎಂದು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.‌

ಮನುಷ್ಯರು ಪರಸ್ಪರ ಪ್ರೀತಿಸುವ ಸಮಾಜವನ್ನು ಗಟ್ಟಿಗೊಳಿಸೋಣ: ಸಿ.ಎಂ ಕರೆ*

ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಮನುಷ್ಯರು ಮನುಷ್ಯರನ್ನು ಪ್ರೀತಿಸುವ ಸರ್ವ ಜನಾಂಗದ ಶಾಂತಿಯ ತೋಟ ನಮ್ಮದು‌. ಈ ಸಮಾಜವನ್ನು ನಾವು ಇನ್ನಷ್ಟು ಗಟ್ಟಿಗೊಳಿಸೋಣ. ಜೊತೆಗೆ ಅಸಮಾನತೆಯ ಸಮಾಜವನ್ನು ಸುಧಾರಿಸಿ ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಸಮಾಜ ಕಟ್ಟೋಣ ಎಂದು ಕರೆ ನೀಡಿದರು.

ಅತ್ಯಂತ ಪ್ರಜ್ಞಾವಂತರೇ ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆಗಳು ನಡೆಯಬಾರದು ಎಂದರು.‌

Related Posts

Leave a Reply

Your email address will not be published. Required fields are marked *