ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ವಾತಾವರಣದ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಟೂರ್ನಿ ಇಂದಿನಿಂದ ಪುನರಾರಂಭವಾಗಲಿದೆ.
ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ 7.30ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಣ ಪಂದ್ಯ ನಡೆಯಲಿದೆ. ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಹೇಳಿದ ನಂತರ ಕೊಹ್ಲಿ ಆಡುತ್ತಿರುವ ಮೊದಲ ಪಂದ್ಯವಾಗಿರುವ ಕಾರಣ ಕೊಹ್ಲಿ ಪ್ರಮುಖ ಆಕರ್ಷಣೆ ಆಗಲಿದ್ದಾರೆ.
ಐಪಿಎಲ್ 18ನೇ ಆವೃತ್ತಿಯ ಫೈನಲ್ ಪಂದ್ಯ ಜೂನ್ 3ಕ್ಕೆ ಮುಂದೂಡಲಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್ ಸಿಬಿ ಪಂದ್ಯ ರದ್ದಾಗಿದ್ದರೂ ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಕೆಕೆಆರ್ ವಿರುದ್ಧ ಆರ್ ಸಿಬಿ ಆಡಲಿದೆ.
ಆರ್ ಸಿಬಿ ಈಗಾಗಲೇ 16 ಅಂಕ ಗಳಿಸಿದ್ದು ಒಂದು ಪಂದ್ಯ ಗೆದ್ದರೂ ಪ್ಲೇಆಫ್ ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ನಾಳಿನ ಪಂದ್ಯ ಆರ್ ಸಿಬಿ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.
ತವರಿಗೆ ಮರಳಿದ್ದ ವಿದೇಶೀ ಆಟಗಾರರು ಬಹುತೇಕ ಆರ್ ಸಿಬಿ ತಂಡಕ್ಕೆ ಮರಳಿದ್ದಾರೆ. ಅದರಲ್ಲೂ ಶೆಪರ್ಡ್, ಲಿಯಾಮ್ ಲಿವಿಂಗ್ ಸ್ಟನ್ ಮತ್ತು ಜೋಸ್ ಹಾಜ್ಲೆವುಡ್ ತಂಡಕ್ಕೆ ಮರಳಿದ್ದಾರೆ. ಆದರೆ ಗಾಯಗೊಂಡಿರುವ ಹಾಜ್ಲೆವುಡ್ ಆಡುವುದು ಅನುಮಾನವಾಗಿದ್ದು, ನಂತರದ ಪಂದ್ಯಗಳಲ್ಲಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಬೆರಳಿಗೆ ಗಾಯ ಮಾಡಿಕೊಂಡಿರುವ ನಾಯಕ ರಜತ್ ಪಟಿದಾರ್ ಆಡುವುದು ಅನಿವಾರ್ಯವಾಗಿದೆ. ಮತ್ತೊಂದೆಡೆ ದೇವದತ್ ಪಡಿಕಲ್ ಗಾಯಗೊಂಡು ಐಪಿಎಲ್ ಟೂರ್ನಿಯಿಂದಲೇ ಹೊರಬಿದ್ದಿದ್ದು, ಅವರ ಜಾಗಕ್ಕೆ ಮಯಾಂಕ್ ಅಗರ್ ವಾಲ್ ಬಂದಿದ್ದಾರೆ. ಆದರೆ ಅವರು ಮೈದಾನಕ್ಕೆ ಇಳಿಯುತ್ತಾರೆಯೇ ಎಂಬುದು ಕಾದು ನೋಡಬೇಕಾಗಿದೆ.
ಮತ್ತೊಂದೆಡೆ ಕೆಕೆಆರ್ ಪ್ಲೇಆಫ್ ಆಸೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಿಸುತ್ತಿದೆ. ಅಜಿಂಕ್ಯ ರಾಹನೆ ನೇತೃತ್ವದ ಕೆಕೆಆರ್ 12 ಪಂದ್ಯಗಳಿಂದ 5 ಜಯ, 6 ಸೋಲು ಹಾಗೂ 1 ಪಂದ್ಯ ರದ್ದಾದ ಕಾರಣ 11 ಅಂಕ ಸಂಪಾದಿಸಿ 6ನೇ ಸ್ಥಾನದಲ್ಲಿದೆ. ತಂಡದಲ್ಲಿ ಪ್ರಬಲ ಆಟಗಾರರಿದ್ದರೂ ಸ್ಥಿರ ಪ್ರದರ್ಶನ ಬಾರದೇ ಇರುವುದು ತಂಡದ ಚಿಂತೆ ಹೆಚ್ಚಿಸಿದೆ.