ಜಾತಕದಲ್ಲಿ ದೊಡ್ಡ ದೋಷವಿದೆ, ಪೂಜೆ ಮಾಡಿ ಸರಿ ಮಾಡುವುದಾಗಿ ಹೇಳಿ ನಂಬಿಸಿ ಮಹಿಳಾ ಪೊಲೀಸ್‌ಗೆ 5 ಲಕ್ಷ ವಂಚಿಸಿದ್ದ ಜ್ಯೋತಿಷಿಯನ್ನು ಬೆಂಗಳೂರಿನ ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.
ಆಡುಗೋಡಿಯ ಪೊಲೀಸ್ ಕ್ವಾಟ್ರಸ್‌ನಲ್ಲಿದ್ದ ಮಹಿಳಾ ಕಾನ್‌ಸ್ಟೇಬಲ್ ಅನಾರೋಗ್ಯಕ್ಕೆ ಒಳಗಾದಾಗ ಸ್ನೇಹಿತರ ಮೂಲಕ ಕಲಬುರಗಿಯ ಜ್ಯೋತಿಷಿ ಹೇಮಂತ್ ಭಟ್ ಪರಿಚಯವಾಗಿತ್ತು. ಇದಕ್ಕೂ ಮುನ್ನ ಇಬ್ಬರು ಸ್ನೇಹಿತೆಯರು ಜ್ಯೋತಿಷಿ ಮಾತು ನಂಬಿ ಹೋದಾಗ, ಅವರಿಗೂ ಪೂಜೆ ಮಾಡಿದ್ದ. ನಿನ್ನ ಜಾತಕದಲ್ಲಿ ತುಂಬಾ ದೋಷವಿದೆ, ಪೂಜೆ ಮಾಡಿಸಲೇಬೇಕು. ಇದರಿಂದ ಆರೋಗ್ಯ ಸರಿ ಮಾಡುತ್ತೇನೆ, ಭಯಬೇಡ. ಈ ವಿಚಾರದಲ್ಲಿ ನಾನು ಡಾಕ್ಟರ್, ನಿನಗೆ ಮದುವೆಯೂ ಆಗುವಂತೆ ಮಾಡುತ್ತೇನೆ ಎಂದು ವಂಚಕ ಹೇಳಿದ್ದ.
ಕೋರಮಂಗಲದಲ್ಲಿ ಲಾಡ್ಜ್‌ಗೆ ಕರೆಸಿ ಪೂಜೆ ಮಾಡಿಸಿ ಹಂತ ಹಂತವಾಗಿ 5 ಲಕ್ಷ ರೂ. ಪಡೆದುಕೊಂಡಿದ್ದ. ಜ್ಯೋತಿಷ್ಯ ನೆಪದಲ್ಲಿ ಆತ್ಮಗಳ ಕಥೆ ಕಟ್ಟಿ ವಶೀಕರಣ ಮಾಡಿದ್ದ ಎಂದು ಸಂತ್ರಸ್ತ ಮಹಿಳಾ ಕಾನ್ಸ್ಟೇಬಲ್ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸರು ಆರೋಪಿ ಜ್ಯೋತಿಷಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಎಲ್ಲೆಲ್ಲಿ ಯಾರಿಗೆಲ್ಲ ವಂಚಿಸಿದ್ದಾನೆ ಎಂಬ ಬಗ್ಗೆ ಮಾಹಿತಿ ಪಡೆಯುವ ಪ್ರಯತ್ನ ನಡೆಸಿದ್ದಾರೆ.