ಬೆಂಗಳೂರಿನಲ್ಲಿರುವ ಹರೇ ಕೃಷ್ಣ ದೇವಸ್ಥಾನ ಮತ್ತು ಶೈಕ್ಷಣಿಕ ಸಂಕೀರ್ಣದ ಒಡೆತನವು ಬೆಂಗಳೂರು ಇಸ್ಕಾನ್ ಸೊಸೈಟಿಗೆ ಸೇರಿದ್ದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಈ ಸಂಬಂಧ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಬೆಂಗಳೂರು ಇಸ್ಕಾನ್ ಸೊಸೈಟಿ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠವು ಬೆಂಗಳೂರು ಇಸ್ಕಾನ್ ಸೊಸೈಟಿ ಪರ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್ 2011ರಲ್ಲಿ ‘ಇಸ್ಕಾನ್ ಮುಂಬೈ’ ಪರವಾಗಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಬೆಂಗಳೂರು ಇಸ್ಕಾನ್ ಸೊಸೈಟಿ ಪ್ರತಿನಿಧಿ ಕೋದಂಡರಾಮ ದಾಸ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬೆಂಗಳೂರಿನ ಸ್ಥಳೀಯ ನ್ಯಾಯಾಲಯದ 2009 ರ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿದ್ದರು.
ಈ ಹಿಂದೆ ವಿಚಾರಣಾ ನ್ಯಾಯಾಲಯವು ಬೆಂಗಳೂರು ಇಸ್ಕಾನ್ ಸೊಸೈಟಿ ಪರವಾಗಿ ತೀರ್ಪು ನೀಡಿತ್ತು. ಇಸ್ಕಾನ್ ಮುಂಬೈ ವಿರುದ್ಧ ಶಾಶ್ವತ ತಡೆಯಾಜ್ಞೆ ನೀಡಿತ್ತು. ಹೀಗಿದ್ದರೂ ತೀರ್ಪನ್ನು ರದ್ದುಗೊಳಿಸಿದ್ದ ಹೈಕೋರ್ಟ್, ದೇವಾಲಯದ ನಿಯಂತ್ರಣಾಧಿಕಾರವನ್ನು ಇಸ್ಕಾನ್ ಮುಂಬೈಗೆ ನೀಡಿತ್ತು. ಕರ್ನಾಟಕದಲ್ಲಿ ನೋಂದಾಯಿತ ಬೆಂಗಳೂರು ಇಸ್ಕಾನ್ ಸೊಸೈಟಿಯು ದಶಕಗಳಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತ ಬೆಂಗಳೂರು ದೇವಾಲಯವನ್ನು ನಿರ್ವಹಿಸುತ್ತಿರು ವುದಾಗಿ ವಾದಿಸಿತ್ತು. ಇಸ್ಕಾನ್ ಬೆಂಗಳೂರು ತನ್ನ ಶಾಖೆಯಾಗಿದ್ದು ಅದರ ಆಸ್ತಿಯು ನ್ಯಾಯಸಮ್ಮತವಾಗಿ ತನ್ನ ವ್ಯಾಪ್ತಿಗೆ ಸೇರಿದೆ ಎಂದು ಇಸ್ಕಾನ್ ಮುಂಬೈ ಪ್ರತಿಪಾದಿಸಿತ್ತು.