ಹಿಂದೂ ಪರ ಹೋರಾಟಗಾರ ಎನ್ನಲಾಗುವ ಪುನೀತ್ ಕೆರೆಹಳ್ಳಿಗೆ ಮೈಸೂರು ಮೂಲದ ವ್ಯಕ್ತಿ ಜೀವ ಬೆದರಿಕೆ ಒಡ್ಡಿರುವುದು ಬಹಿರಂಗಗೊಂಡಿದೆ.
ಮೈಸೂರಿನ ಉದಯಗಿರಿ ನಿವಾಸಿ ಅಕ್ರಮ್ ಖಾನ್ ಎಂಬ ವ್ಯಕ್ತಿ ಇದ್ರಿಷ್ ಪಾಷ ಸಾವಿಗೆ ಪ್ರತೀಕಾರವಾಗಿ ನಿನ್ನ ಮುಗಿಸುತ್ತೇವೆ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಜೀವ ಬೆದರಿಕೆಯೊಡ್ಡಿ ಪೋಸ್ಟ್ ಮಾಡಿದ್ದಾರೆ.
ಈ ಸಂಬಂಧ ಅಕ್ರಮ್ ಖಾನ್ ವಿರುದ್ದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ನ್ಯಾಯಾಲಯದ ಆದೇಶ ಪಡೆದು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ತನಿಖೆ ಕೈಗೊಂಡು ಮುಂದಿನ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಇದ್ರೀಸ್ ಪಾಷಾ ಕೊಲೆಗೆ ಸಂಬಂಧಿಸಿದಂತೆ ಸಹೋದರ ಯೂನಸ್ ಪಾಷಾ ಸಲ್ಲಿಸಿದ ಎಫ್‌ಐಆರ್‌ನಲ್ಲಿ, ಸ್ಥಳೀಯ ಮಾರುಕಟ್ಟೆಯಿಂದ ಜಾನುವಾರುಗಳನ್ನು ಖರೀದಿಸಲಾಗಿದೆ ಎಂದು ಸಾಬೀತುಪಡಿಸುವ ದಾಖಲೆಗಳನ್ನು ತೋರಿಸಿದ್ದರು. ಪುನೀತ್ ಇದ್ರಿಸ್ ಮೇಲೆ ಹಲ್ಲೆ ಮಾಡುವ ಮೊದಲು ಹಣಕ್ಕೆ ಬೇಡಿಕೆ ಇಟ್ಟರು ಎಂದು ಹೇಳಲಾಗಿದೆ. ಈ ಕೊಲೆ ಖಂಡಿಸಿ ಮುಸ್ಲಿಂ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸಿ ನ್ಯಾಯಕ್ಕೆ ಆಗ್ರಹಿಸಿದ್ದರು.
ಈ ಹಿಂದೆ ವಸತಿ ಮತ್ತು ವಕ್ಫ್ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ, ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ ಆರೋಪದ ಮೇಲೆ ಹಿಂದುತ್ವ ಕಾರ್ಯ ಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ಚಾಮರಾಜಪೇಟೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಜಾತಿ ನಿಂದನೆ ಮಾಡಿರುವ ಪುನೀತ್ ಕೆರೆಹಳ್ಳಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಭೈರಪ್ಪ ಹರೀಶ್ ನೀಡಿದ ದೂರಿನಡಿ ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದರು. ಇವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು. ರಾಜಸ್ಥಾನದಿಂದ ನಾಯಿ ಮಾಂಸ ಪೂರೈಕೆ ಆಗುತ್ತಿದೆ ಎಂಬ ಗಲಭೆ ಎಬ್ಬಿಸುವಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಅದು ನಾಯಿ ಮಾಂಸ ಅಲ್ಲ, ರಾಜಸ್ಥಾನದ ತಳಿಯೊಂದರ ಕುರಿ ಮಾಂಸ ಎಂಬುದನ್ನು ಸಾಬೀತುಗೊಳಿಸಲಾಗಿತ್ತು.