ಶ್ರೀನಗರ: ಭಾರತದ ಮೇಲೆ ಅಣುಬಾಂಬ್ ದಾಳಿಯ ಬ್ಲಾಕ್ ಮೇಲ್ ಮಾಡಿದ ಪಾಕಿಸ್ತಾನದ ಬಳಿ ಅಣುಶಕ್ತಿ ಇರುವುದು ಎಷ್ಟು ಸುರಕ್ಷಿತ? ಈ ಬಗ್ಗೆ ಜಗತ್ತು ಎಚ್ಚೆತ್ತುಕೊಳ್ಳಬೇಕು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಜಮ್ಮು ಕಾಶ್ಮೀರದ ಬಾದಾಮಿ ಭಾಗ್ ಗೆ ಗುರುವಾರ ಭೇಟಿ ನೀಡಿದ ನಂತರ ಯೋಧರನ್ನು ಉದ್ದೇಶಿಸಿದ ಮಾತನಾಡಿದ ಅವರು, ಭಾರತ ಉಗ್ರರ ವಿರುದ್ಧ ಎಷ್ಟು ಕಠಿಣ ನಿಲುವು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂಬುದು ಆಪರೇಷನ್ ಸಿಂಧೂರ್ ನಿಂದ ಜಗತ್ತಿಗೆ ತಿಳಿದಿದೆ ಎಂದರು.
ಪಾಕಿಸ್ತಾನದ ಅಣು ಬಾಂಬ್ ದಾಳಿಯ ಬೆದರಿಕೆ ಒಡ್ಡಿತ್ತು. ಆದರೆ ಭಾರತ ಈ ರೀತಿಯ ಬ್ಲಾಕ್ ಮೇಲ್ ಗಳಿಗೆ ಹೆದರುವುದಿಲ್ಲ ಎಂದು ತೋರಿಸಿಕೊಟ್ಟಿತು. ಪಾಕಿಸ್ತಾನ ಈ ರೀತಿಯ ಹೇಳಿಕೆ ನೀಡುವ ಮೂಲಕ ಎಷ್ಟು ಬೇಜವಾಬ್ದಾರಿ ಎಂಬುದನ್ನು ತಿಳಿಯಿತು ಎಂದು ಅವರು ಹೇಳಿದರು.
ಪಾಕಿಸ್ತಾನದ ಅಣುಬಾಂಬ್ ಬೆದರಿಕೆಯ ಬೆಳವಣಿಗೆಯಿಂದ ಪಾಕಿಸ್ತಾನದ ಬಳಿ ಅಣು ಬಾಂಬ್ ಇರುವುದು ಎಷ್ಟು ಸುರಕ್ಷಿತ ಎಂಬುದನ್ನು ಜಗತ್ತು ಗಮನಿಸಬೇಕಾಗಿದ್ದು, ಜಗತ್ತು ಈ ಬಗ್ಗೆ ಎಚ್ಚರಿಕೆ ಜೊತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ನಾನು ಕೇಂದ್ರ ಸಚಿವನಾಗಿರಬಹುದು. ಆದರೆ ಅದಕ್ಕೂ ಮೊದಲು ಭಾರತೀಯ. ಜಮ್ಮು ಕಾಶ್ಮೀರದ ಜನತೆಯ ಆಕ್ರೋಶವನ್ನು ನಾನು ಗಮನಿಸಿದ್ದೇನೆ. ಧರ್ಮ ಕೇಳಿ ಉಗ್ರರು ನಡೆಸುವ ದಾಳಿಗೆ ತಕ್ಕ ಉತ್ತರ ನೀಡಿದ್ದೇವೆ. ಆಪರೇಷನ್ ಸಿಂಧೂರ್ ಕೇವಲ ಹೆಸರಲ್ಲ. ಅದು ದೇಶದ ಜನರ ಭಾವನೆಯ ಪ್ರತೀಕ ಎಂದು ಅವರು ಹೇಳಿದರು.
ಭಾರತೀಯ ಸೇನೆಯ ದಾಳಿ ಎಷ್ಟು ನಿಖರವಾಗಿರುತ್ತದೆ ಎಂಬುದನ್ನು ಇಡೀ ಜಗತ್ತು ನೋಡಿದೆ. ನಾವು ದಾಳಿ ಮಾಡಿದರೆ ಶತ್ರುಗಳ ಹೆಣಗಳನ್ನು ಲೆಕ್ಕ ಹಾಕುತ್ತಿರುಬೇಕು ಅಷ್ಟೆ ಎಂದು ರಾಜನಾಥ್ ಸಿಂಗ್ ನುಡಿದರು.