ಬೆಂಗಳೂರು: ವರ್ಕ್ ಫ್ರಂ ಹೊಮ್ ಪ್ರಾಜೆಕ್ಟ್ ನೆಪದಲ್ಲಿ ಸಾರ್ವಜನಿಕರಿಂದ ಫೋನ್‍ಪೇ,ಗೂಗಲ್ ಪೇ ಬ್ಯಾಂಕ್‍ಗಳ ಮೂಲಕ ಹಣ ವರ್ಗಾವಣೆ ಪಡೆದು ಮೋಸ ಮಾಡುತ್ತಿದ್ದ ಅಂತರಾಜ್ಯ ಗ್ಯಾಂಗ್ ನ್ನು ಬೇಧಿಸಿರುವ ಆಡುಗೊಡಿ ಪೊಲೀಸರು
12 ಆರೋಪಿಗಳನ್ನು ಬಂಧಿಸಿದ್ದಾರೆ.
ಉತ್ತರಪ್ರದೇಶದ ಬಲಿಯಾ ಜಿಲ್ಲೆಯ ಹರ್ಷವರ್ದನ್ ಓಜಾ (25), ಆಕಾಶ್ ಕುಮಾರ್ (23), ಗೋರಖನಾಥ ಯಾದವ್ (24), ಆಕಾಶ್ ಕುಮಾರ್ ಸಿಂಗ್ (19), ಅಮಿತ್ ಯಾದವ್ (19). ಪತೇಪುರ್ ಜಿಲ್ಲೆಯ ಗೌರವ್ ಪ್ರತಾಪ್ ಸಿಂಗ್ (22), ಬ್ರಿಜೇಶ್ ಸಿಂಗ್ (20), ಪ್ರಯಾಗ್ ರಾಜ್ ಜಿಲ್ಲೆಯ ರಾಜ್ ಮಿಶ್ರಾ (21), ಅಲಹಾಬಾದ್ ಜಿಲ್ಲೆಯ ತುಷಾರ ಮಿಶ್ರಾ (22), ಸುಲ್ತಾನಪುರ ಜಿಲ್ಲೆಯ ಗೌತಮ್ ಶೈಲೇಶ (25), ನವಿ ಮುಂಬೈನ ಸೋನು (27) ಬಿಹಾರ ರಾಜ್ಯದ ಕ್ಯಾಸಪುರದ ಸಂಜೀತ್ ಕುಮಾರ್ ಯಾದವ್ (25) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಗ್ಯಾಂಗ್ ನಿಂದ ಕೃತ್ಯಕ್ಕೆ ಬಳಸುತ್ತಿದ್ದ 400 ಮೊಬೈಲ್‍ಸಿಮ್‍ಗಳು, 140 ಎಟಿಎಂ ಕಾರ್ಡ್‌ಗಳು, 17 ಚೆಕ್ ಪುಸ್ತಕಗಳು, 27 ಮೊಬೈಲ್‍ಗಳು, 22 ವಿವಿಧ ಬ್ಯಾಂಕ್ ಪಾಸ್‍ಬುಕ್ ಗಳು,ಆದಾಯ ಮತ್ತು ಖರ್ಚುವೆಚ್ಚಗಳನ್ನು ನಮೂದಿಸಿರುವ ಸ್ಪೈರಲ್ ಬೈಂಡಿನ ಪುಸ್ತಕ 15 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ.
ಆಡುಗೊಡಿಯ ಎಲ್.ಆರ್ ನಗರದ ಸುಮಯಾ ಬಾನು ಅವರು ನೀಡಿದ ದೂರಿನಲ್ಲಿ ಒಂದು ತಿಂಗಳ ಹಿಂದೆ ನನ್ನ ಮೊಬೈಲ್ ನಂಬರ್ ಗೆ ಅಪರಿಚಿತ ವ್ಯಕ್ತಿಯೊಬ್ಬರು ಮನೆಯಲ್ಲೇ ಕೆಲಸ ಮಾಡುವ (ವರ್ಕ್ ಫ್ರಂ ಹೊಮ್) ಪ್ರಾಜೆಕ್ಟ್ ವರ್ಕ್ ಇರುವುದಾಗಿ ಮೇಸೆಜ್ ಮೂಲಕ ತಿಳಿಸಿ ಕೆಲಸ ಮುಗಿಸಿದ್ದಲ್ಲಿ ಕಮೀಷನ್ ಹಣ ನೀಡುವುದಾಗಿ ತಿಳಿಸಿ ನಂಬಿಸಿದ್ದರು.
ಕೆಲಸ ಮುಗಿಸಿದಾಗ, ಅಪರಿಚಿತ ವ್ಯಕ್ತಿಯು ಪಿರ್ಯಾದುದಾರರಿಗೆ ಪ್ರಾಜೆಕ್ಟ್ ವರ್ಕ್ ಕ್ರೆಡಿಟ್‍ಸ್ಕೂರ್ ಬ್ಯಾಲೆನ್ಸ್ ಶೀಟ್ ನೆಗೇಟಿವ್ ತೋರಿಸುವುದಾಗಿ ತಿಳಿಸಿ, ಹಣ ಡ್ರಾ ಮಾಡಲು ಅಪರಿಚಿತ ವ್ಯಕ್ತಿಯು ನೀಡುವ ಪ್ಲಾಟ್‍ಫಾರ್ಮ್‍ನಲ್ಲಿ ರಿಜಿಸ್ಟರ್ ಮಾಡುವಂತೆ ತಿಳಿಸಿದ್ದ.
20 ಸಾವಿರ ಖಾತೆಗೆ:
ಅದರಂತೆ ರಿಜಿಸ್ಟರ್ ಮಾಡಿದ್ದು ನಂತರ 800 ರೂ ಲಾಭದ ಹಣ ಖಾತೆಗೆ ಬಂದಿದೆ. ಉಳಿದ ಹಣ ಡ್ರಾ ಮಾಡಲು 10 ಸಾವಿರ ಹಣವನ್ನು ಪೇ ಮಾಡಲು ತಿಳಿಸಿದ್ದು ಅದರಂತೆ ಹಣವನ್ನು ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾವಣೆ ಮಾಡಿದ ನಂತರ 20 ಸಾವಿರ ಹಣವು ಖಾತೆಗೆ ಜಮಾ ಆಗಿರುತ್ತದೆ.
ಇದೇ ರೀತಿ ಆಸೆ ಮತ್ತು ನಂಬಿಕೆ ಬರುವಂತೆ ಮಾಡಿ ಸ್ಕೋರ್ ಬ್ಯಾಲೆನ್ಸ ಶೀಟ್‍ನಲ್ಲಿ 10,83,502/-ಹಣವನ್ನು ತೋರಿಸಿದ್ದು, ಈ ಹಣವನ್ನು ಖಾತೆಗೆ ಜಮಾವಾಗಬೇಕಾದರೆ ಅಪರಿಚಿತನು ತಿಳಿಸಿದ ವಿವಿಧ ಬ್ಯಾಂಕ್‍ಗಳ ಖಾತೆಗಳಿಗೆ ಹಂತ ಹಂತವಾಗಿ 5 ಲಕ್ಷ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ಇನ್ನೂ ಹೆಚ್ಚಿನ ಹಣ 3,24,000 ಹಣ ಜಮಾ ಮಾಡಲು ತಿಳಿಸಿ ವಂಚನೆ ಮಾಡಿರುವುದನ್ನು ತಿಳಿಸಿದ್ದರು.
ಖಾತೆದಾರರಿಗೆ ನೋಟೀಸ್:
ಪ್ರಕರಣದ ತನಿಖೆಯನ್ನು ಆಡುಗೋಡಿ ಪೊಲೀಸ್ ಇನ್ಸ್‌ಪೆಕ್ಟರ್ ರವಿಕುಮಾರ್ ಮತ್ತವರ ಸಿಬ್ಬಂದಿ ವಿವಿಧ ಆಯಾಮಗಳಲ್ಲಿ ಕೈಗೊಂಡು, ಸುಮಯಾ ಅವರಿಂದ ಹಣ ವರ್ಗಾವಣೆಯಾಗಿದ್ದ ಪೆಡರಲ್ ಬ್ಯಾಂಕ್, ಉತ್ತರಪ್ರದೇಶ ಶಾಖೆಯ ಕೆವೈಸಿ ಡಿಟೈಲ್ಸ್ ನ್ನು ಪಡೆದು ಖಾತೆದಾರರಿಗೆ ನೋಟೀಸ್ ನೀಡಲಾಗಿತ್ತು.
ಖಾತೆದಾರನು ನೋಟಿಸ್‍ನೊಂದಿಗೆ ಠಾಣೆಗೆ ಹಾಜರಾಗಿ ಬ್ಯಾಂಕ್‍ನ ಖಾತೆಯನ್ನು ಮುಂಬೈನಲ್ಲಿರುವ ಲೇಬರ್ ಕಾಂಟ್ರಾಕ್ಟ್ ನ ಮಾಲೀಕನು ತೆರೆಸಿದ್ದು,ಅದರ ಪಾಸ್‍ಬುಕ್, ಎಟಿಎಂಕಾರ್ಡ್, ಸಿಮ್‍ಕಾರ್ಡ್ ಆತನ ಬಳಿಯಲ್ಲಿಯೇ ಇಟ್ಟುಕೊಂಡಿರುತ್ತಾನೆಂದು ತಿಳಿಸಿದ್ದು,ಬ್ಯಾಂಕ್‍ನ ಖಾತೆಯನ್ನು ಲೀನ್‍ಮಾರ್ಕ್ ಮಾಡಿಸಲಾಗಿರುತ್ತದೆ.
ಮಾಲೀಕ ವಿಚಾರಣೆ:
ತನಿಖೆಯನ್ನು ಮುಂದುವರೆಸಿ ಪೆಡರಲ್ ಬ್ಯಾಂಕ್‍ನ ಖಾತೆದಾರನೊಂದಿಗೆ ಮುಂಬೈಗೆ ತೆರಳಿ ಲೇಬರ್ ಕಾಂಟ್ರಾಕ್ಟ್ ಕೆಲಸ ಮಾಡಿಕೊಂಡಿದ್ದ ಮಾಲೀಕನನ್ನು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಲಾಗಿ ಆತನು ಲೇಬರ್ ಕಾಂಟ್ರಾಕ್ಟ್ ಕೆಲಸ ಮಾಡುವ ವ್ಯಕ್ತಿಗಳಿಂದ ಬ್ಯಾಂಕ್ ಖಾತೆಗಳನ್ನು ತೆರೆಸಿ, ಖಾತೆಯ ಪಾಸ್‍ಬುಕ್, ಎಟಿಎಂ ಕಾರ್ಡ್, ಸಿಮ್ ಕಾರ್ಡ್‍ಗಳನ್ನು ಉತ್ತರ ಪ್ರದೇಶದಲ್ಲಿರುವ ಮೂವರು ವ್ಯಕ್ತಿಗಳಿಗೆ ನೀಡುತ್ತಿದ್ದಾಗಿ ತಿಳಿಸಿದ್ದು ಇದಕ್ಕೆ ಅವರುಗಳು ಒಂದು ಖಾತೆಗೆ 1500 ರೂ ಕಮೀಷನ್ ನೀಡುತ್ತಿದ್ದರೆಂದು ತಿಳಿಸಿದನು. ಇದೇ ರೀತಿ ಸುಮಾರು 22 ಖಾತೆಗಳ ದಾಖಲಾತಿಗಳನ್ನು ನೀಡಿದ್ದು ಕಮೀಷನ್ ಹಣವನ್ನು ಪಡೆದಿರುವುದಾಗಿ ತಿಳಿಸಿರುತ್ತಾನೆ.
ಇತರ ಆರೋಪಿಗಳು ಭಾಗಿ:
ಮುಂಬೈನಲ್ಲಿ ಕಮೀಷನ್ ಪಡೆದ ಆರೋಪಿಯೊಂದಿಗೆ ಉತ್ತರ ಪ್ರದೇಶಕ್ಕೆ ತೆರಳಿದ್ದು, ಅಲ್ಲಿ ಒರ್ವ ಆರೋಪಿಯನ್ನು ತೋರಿಸಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ಆತನು ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪೋಪ್ಪಿಕೊಂಡಿದ್ದು, ತನ್ನೊಂದಿಗೆ ಇತರೇ ಸ್ನೇಹಿತರುಗಳು ಭಾಗಿಯಾಗಿರುವುದಾಗಿ ತಿಳಿಸಿರುತ್ತಾನೆ. ಈ ಪ್ರಕರಣದಲ್ಲಿ ತನಗೆ ರಾಷ್ಟ್ರೀಕೃತ ಬ್ಯಾಂಕ್ ಖಾತೆಯ ದಾಖಲಾತಿಗಳನ್ನು ನೀಡಿದ್ದಲ್ಲಿ 18 ರಿಂದ 20 ಸಾವಿರ ಕಮೀಷನ್ ಹಣ ವನ್ನು ಪಡೆಯುತ್ತಿದ್ದಾಗಿ, ಲೋಕಲ್ ಬ್ಯಾಂಕ್ ಖಾತೆಯಾಗಿದ್ದಲ್ಲಿ 3 ಸಾವಿರ ರೂ ಕಮೀಷನ್ ಪಡೆದುಕೊಂಡಿರುವುದಾಗಿ ತಿಳಿಸಿರುತ್ತಾನೆ.
ನ್ಯಾಯಾಂಗ ಬಂಧನಕ್ಕೆ:
ಮುಂಬೈನಲ್ಲಿ ಕಮೀಷನ್ ಪಡೆಯುತ್ತಿದ್ದ ಆರೋಪಿಯೊಂದಿಗೆ ವಾರಣಾಸಿಯ ಪ್ರಯಾಗ್‍ರಾಜ್‍ನಲ್ಲಿರುವ ಕಮಲಾನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ 10 ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಯಿತು. ವಶಕ್ಕೆ ಪಡೆದ 10 ಮಂದಿ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಪ್ರಕರಣದಲ್ಲಿ ಬಾಗಿಯಾಗಿರುವುದನ್ನು ಬಾಯ್ಬಿಟ್ಟಿದ್ದಾರೆ. ತಪ್ಪೊಪ್ಪಿಕೊಂಡಿರುತ್ತಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ 12 ಆರೋಪಿಗಳನ್ನು ಅವರಿಂದ ವಶಕ್ಕೆ ಪಡೆದ ವಸ್ತುವಿನೊಂದಿಗೆ ಏ.27 ರಂದು ಉತ್ತರ ಪ್ರದೇಶದಲ್ಲಿರುವ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಿ ಕೋರ್ಟ್ ಗೆ ಹಾಜರುಪಡಿಸಿದ್ದು ಎಲ್ಲಾ 12 ಆರೋಪಿಗಳೆಲ್ಲರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.