Menu

ಮೇ 27ಕ್ಕೆ ಮುಂಗಾರು ಪ್ರವೇಶ: ಹವಾಮಾನ ಇಲಾಖೆ ಮುನ್ಸೂಚನೆ

ನವದೆಹಲಿ; ಮುಂಗಾರು ಮಾರುತ ವಾಡಿಕೆಗಿಂತ ಮುಂಚಿತವಾಗಿಯೇ ಮೇ 27ರಂದು ಕೇರಳ ಪ್ರವೇಶಿಸಲಿವೆ ಎಂದು ಕೇಂದ್ರ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ.

ಮಂಗಳವಾರ ಮುಂಗಾರು ಮಾರುತಗಳು ದಕ್ಷಿಣ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ದಕ್ಷಿಣ ಅಂಡಮಾನ್ ಸಮುದ್ರ, ನಿಕೋಬಾರ್ ದ್ವೀಪಗಳು ಮತ್ತು ಉತ್ತರ ಅಂಡಮಾನ್ ಸಮುದ್ರದ ಕೆಲವು ಪ್ರದೇಶಗಳಿಗೆ ಪ್ರವೇಶಿಸಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮುಂಗಾರು ಮಳೆಯ ಅಬ್ಬರದಿಂದಾಗಿ ನಿಕೋಬಾರ್ ದ್ವೀಪ ಸಮೂಹದ ಬಳಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಸಾಮಾನ್ಯವಾಗಿ, ಮೇ 20ರ ನಂತರ ಈ ಭಾಗದಲ್ಲಿ ಮುಂಗಾರು ಮಾರುತಗಳು ಕಾಣಿಸಿಕೊಳ್ಳುತ್ತವೆ. ಆದರೆ, ಈ ಬಾರಿ ಮಾನ್ಸೂನ್ ವಾಡಿಕೆಗಿಂತ ಮುಂಚಿತವಾಗಿ ಆಗಮಿಸಿದೆ.

3 ದಿನದಲ್ಲಿ ಅರಬ್ಬಿ ಸಮುದ್ರಕ್ಕೆ ಪ್ರವೇಶ

ಮುಂದಿನ ಮೂರುರಿಂದ ನಾಲ್ಕು ದಿನಗಳಲ್ಲಿ ಬಂಗಾಳ ಕೊಲ್ಲಿಯ ಕೇಂದ್ರ ಭಾಗವನ್ನು ಆವರಿಸಲಿರುವ ಮುಂಗಾರು ಮಾರುತಗಳು, ಸಂಪೂರ್ಣ ಬಂಗಾಳ ಕೊಲ್ಲಿಯನ್ನು ಸುತ್ತುವರಿದು ಅರಬ್ಬೀ ಸಮುದ್ರದ ಕಡೆಗೆ ಚಲಿಸಲಿವೆ ಎಂದು ಐಎಂಡಿ ತಿಳಿಸಿದೆ.

ಮಾನ್ಸೂನ್ ಮೇ 27ರ ಹೊತ್ತಿಗೆ ಕೇರಳ ಕರಾವಳಿಯ ಮೂಲಕ ಒಳನಾಡಿಗೆ ಪ್ರವೇಶಿಸಿ ದೇಶದ ವಿವಿಧ ಭಾಗಗಳನ್ನು ಆವರಿಸಲಿದೆ ಎಂದು ಕಳೆದ ವಾರ ಐಎಂಡಿ, ಹೇಳಿತ್ತು.

16 ವರ್ಷಗಳಲ್ಲಿ ಮೊದಲ ಬಾರಿಗೆ

ಜೂನ್ 1ರ ಸಾಮಾನ್ಯ ದಿನಾಂಕಕ್ಕಿಂತ ಮುಂಚಿತವಾಗಿ, ಮಾನ್ಸೂನ್ ಮೇ ೨೭ರಂದು ಕೇರಳವನ್ನು ತಲುಪುವ ಸಾಧ್ಯತೆಯಿದೆ. ಐಎಂಡಿ ದತ್ತಾಂಶದ ಪ್ರಕಾರ, ನಿರೀಕ್ಷೆಯಂತೆ ಕೇರಳಕ್ಕೆ ಆಗಮಿಸಿದರೆ, 2009ರಲ್ಲಿ ಮೇ 23ರ ನಂತರ ಬೇಗ ಆವರಿಸುವ ಮುಂಗಾರಾಗಲಿದೆ. ಸಾಮಾನ್ಯವಾಗಿ, ಮುಂಗಾರು ಜೂನ್ ೧ರ ವೇಳೆಗೆ ಕೇರಳದಲ್ಲಿ ಪ್ರಾರಂಭವಾಗುತ್ತದೆ ಮತ್ತು ಜುಲೈ 8ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ.

ಸೆಪ್ಟೆಂಬರ್ 17ರ ಸುಮಾರಿಗೆ ವಾಯವ್ಯ ಭಾರತದಿಂದ ಹಿಮ್ಮೆಟ್ಟಲು ಪ್ರಾರಂಭಿಸುತ್ತದೆ ಮತ್ತು ಅಕ್ಟೋಬರ್ 15ರ ವೇಳೆಗೆ ಸಂಪೂರ್ಣವಾಗಿ ಹಿಮ್ಮೆಟ್ಟುತ್ತದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ವಾಡಿಕೆಗಿಂತ ಹೆಚ್ಚಿನ ಮಳೆ

2025ರ ಮಾನ್ಸೂನ್ ಋತುವಿನಲ್ಲಿ ದೇಶದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಈ ವರ್ಷದ ಮುಂಗಾರಯ ಸಾಮಾನ್ಯಕ್ಕಿಂತ ಹೆಚ್ಚಿನ ಸಂಚಿತ ಮಳೆಯನ್ನು ತರಲಿದೆ, ಇದು ಎಲ್ ನಿನೊ ಪರಿಸ್ಥಿತಿಗಳಿಂದ ಕಡಿಮೆ ಮಳೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುತ್ತದೆ ಎಂದು ಐಎಂಡಿ ತನ್ನ ವರದಿಯಲ್ಲಿ ತಿಳಿಸಿದೆ.

ಜಿಡಿಪಿಗೆ ಶೇ. 18ರಷ್ಟು ಕೊಡುಗೆ

ಭಾರತದ ಕೃಷಿ ವಲಯಕ್ಕೆ ಮಾನ್ಸೂನ್ ನಿರ್ಣಾಯಕವಾಗಿದೆ. ಇದು ದೇಶದ ಜನಸಂಖ್ಯೆಯ ಸುಮಾರು 42 ಪ್ರತಿಶತದಷ್ಟು ಜನರ ಜೀವನೋಪಾಯವನ್ನು ಬೆಂಬಲಿಸುತ್ತದೆ ಮತ್ತು ದೇಶದ ಜಿಡಿಪಿಗೆ ಸುಮಾರು 18 ಪ್ರತಿಶತದಷ್ಟು ಕೊಡುಗೆ ನೀಡುತ್ತದೆ.

ದೇಶಾದ್ಯಂತ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ನಿರ್ಣಾಯಕವಾದ ಜಲಾಶಯಗಳನ್ನು ಮರುಪೂರಣಗೊಳಿಸಲು ಮಾನ್ಸೂನ್ ಅತ್ಯಗತ್ಯವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

2025ರಲ್ಲಿ ಮುಂಗಾರು ವಾಡಿಕೆಗಿಂತ ಹೆಚ್ಚಿನ ಮಳೆಯನ್ನು ಸುರಿಸಲಿದೆ ಎಂದು ಐಎಂಡಿ ಈಗಾಗಲೇ ಮುನ್ಸೂಚನೆ ನೀಡಿದೆ.

ಮುಂಗಾರು ಮಳೆ ದೇಶದ ಕೃಷಿ ವಲಯದ ಆಧಾರಸ್ಥಂಭವಾಗಿದ್ದು, ಶೇಕಡಾ 42ರಷ್ಟು ಜನರ ಜೀವನದ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಇದು ದೇಶದ ಜಿಡಿಪಿಗೆ ಶೇಕಡಾ 18ರಷ್ಟು ಕೊಡುಗೆ ನೀಡುತ್ತದೆ.

Related Posts

Leave a Reply

Your email address will not be published. Required fields are marked *