ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಅಧ್ಯಕ್ಷನಾಗಿ ಮಾಜಿ ರೌಡಿಶೀಟರ್ ಹರೀಶ್ ಇಂಜಾಡಿ ಆಯ್ಕೆಯಾಗಿರುವುದಾಗಿ ಅಸಮಾಧಾನದ ಮಾತುಗಳು ಕೇಳಿ ಬರಲಾರಂಭಿಸಿವೆ. ಈತ ದೇವಸ್ಥಾನದ ಆಡಳಿತ ಮಂಡಳಿಗೆ ವಂಚನೆ ಮಾಡಿ ಈ ಹಿಂದೆ ಜೈಲುಪಾಲಾಗಿದ್ದ. ಇಂಥ ಮಾಜಿ ರೌಡಿಶೀಟರ್‌ಗೆ ದಿನೇಶ್ ಗುಂಡುರಾವ್ ಶಿಫಾರಸು ಮಾಡಿದ್ದಾರೆ ಎಂಬುದು ಗ್ರಾಮಸ್ಥರ ಆಕ್ಷೇಪವಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್, ಕಾಂಗ್ರೆಸ್ ಮುಖಂಡ ಹಾಗೂ ಗ್ರಾ.ಪಂ ಸದಸ್ಯ ಹರೀಶ್ ಇಂಜಾಡಿ ಆಯ್ಕೆಗೆ ಶಿಫಾರಸು ಮಾಡಿದ್ದಾರೆ. ಸಂಸ್ಥೆಯ ಹಿತಾಸಕ್ತಿಗೆ ವಿರುದ್ಧ ಇದ್ದವರು ಅಧ್ಯಕ್ಷರು ಆಗಬಾರದು ಎಂಬ ನಿಯಮ ಮೀರಿ ಆಯ್ಕೆ ಮಾಡಲಾಗಿದೆ. ಈತ ನಕಲಿ ಚೆಕ್ ನೀಡಿ ಹಣ್ಣು ಕಾಯಿ ಟೆಂಡರ್ ಮಾಡಿ ದೇವಸ್ಥಾನಕ್ಕೆ ವಂಚನೆ ಎಸಗಿರುವ ಆರೋಪವಿದೆ. ಇದೇ ವಂಚನೆ ಪ್ರಕರಣದಲ್ಲಿ ಈತನ ಬಂಧನವೂ ಆಗಿತ್ತು.
ಹರೀಶ್‌ಗೆ ಆಡಳಿತ ಮಂಡಳಿಯಲ್ಲಿ ಸದಸ್ಯ ಸ್ಥಾನ ನೀಡಲು ಸುಬ್ರಹ್ಮಣ್ಯ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿತ್ತು, ರೌಡಿಶೀಟರ್ ಹರೀಶ್ ಇಂಜಾಡಿಯನ್ನು ಅಧ್ಯಕ್ಷನನ್ನಾಗಿ ಮಾಡಬೇಡಿ ಎಂದು ಧಾರ್ಮಿಕದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿಗೆ ಪತ್ರ ಕೂಡ ಬರೆದಿದ್ದರು. ಮರಳು ಮಾಫಿಯಾ ಮತ್ತು ಮರ ಕಳ್ಳ ಸಾಗಣೆ ಆರೋಪದ ಬಗ್ಗೆಯೂ ಪತ್ರದಲ್ಲಿ ದಾಖಲೆ ಸಹಿತ ಬರೆಯಲಾಗಿತ್ತು.