ಭಾರತದ ವಾಯುಪಡೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಉಡಾಯಿಸುತ್ತಿದ್ದ ಕ್ಷಿಪಣಿಗಳನ್ನು ತಡೆದು ನಾಶಗೊಳಿಸಿ ಭಾರತ ವನ್ನು ರಕ್ಷಿಸಿದ್ದ S-400 ವಾಯು ರಕ್ಷಣಾ ಕ್ಷಿಪಣಿಯ ಹೆಚ್ಚುವರಿ ಘಟಕಗಳನ್ನು ನೀಡುವಂತೆ ಭಾರತವು ರಷ್ಯಾಗೆ ಮನವಿ ಮಾಡಿದೆ ಎಂದು ವರದಿಯಾಗಿದೆ.
ಪಾಕಿಸ್ತಾನ ಉಡಾಯಿಸಿದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ತಡೆದು ತಟಸ್ಥಗೊಳಿಸುವಲ್ಲಿ ಎಸ್ 400 ನಿರ್ಣಾಯಕ ಪಾತ್ರ ವಹಿಸಿತ್ತು. ಅಧಿಕಾರಿಗಳ ಪ್ರಕಾರ ಪಶ್ಚಿಮ ಗಡಿಯುದ್ದಕ್ಕೂ ವೈಮಾನಿಕ ಬೆದರಿಕೆಗಳನ್ನು ಎದುರಿಸುವಲ್ಲಿ ಈ ವ್ಯವಸ್ಥೆಗಳು ಹೆಚ್ಚಿನ ನಿಖರತೆ ಪ್ರದರ್ಶಿಸಿತ್ತು. ಹೀಗಾಗಿ ಭಾರತವು ರಷ್ಯಾದಿಂದ ಹೆಚ್ಚಿನ ಘಟಕಗಳನ್ನು ಪಡೆಯುವ ಮೂಲಕ ವಾಯು ರಕ್ಷಣಾ ಸಾಮರ್ಥ್ಯಗಳನ್ನು ವಿಸ್ತರಿಸಲು ಯೋಜಿಸಿದ್ದು, ರಷ್ಯಾ ಈ ಮನವಿ ಯನ್ನು ಒಪ್ಪುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ರಷ್ಯಾ ನಿರ್ಮಿತ S-400 ವಾಯು ರಕ್ಷಣಾ ವ್ಯವಸ್ಥೆಗಳಿಗೆ ಭಾರತ ‘ಸುದರ್ಶನ ಚಕ್ರ’ ಎಂದು ಹೆಸರಿಸಿದೆ. ಇದು 600 ಕಿಮೀ ದೂರದವರೆಗಿನ ಗುರಿಗಳನ್ನು ಪತ್ತೆ ಹಚ್ಚುವ ಮತ್ತು 400 ಕಿಮೀ ವ್ಯಾಪ್ತಿಯಲ್ಲಿ ಅವುಗಳನ್ನು ಪ್ರತಿಬಂಧಿಸುವ ಸಾಮರ್ಥ್ಯವನ್ನು ಹೊಂದಿವೆ. ಭಾರತವು 2018 ರಲ್ಲಿ ರಷ್ಯಾ ಜೊತೆ ಐದು S-400 ವಾಯು ರಕ್ಷಣಾ ವ್ಯವಸ್ಥೆಗಳಿಗಾಗಿ 5.43 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿತ್ತು. ಪಾಕಿಸ್ತಾನ ಮತ್ತು ಚೀನಾದಿಂದ ಬರುವ ವೈಮಾನಿಕ ಬೆದರಿಕೆಗಳನ್ನು ಎದುರಿಸಲು 2021 ರಲ್ಲಿ ಪಂಜಾಬ್‌ನಲ್ಲಿ ಮೊದಲ ಘಟಕವನ್ನು ನಿಯೋಜಿಸಲಾಗಿತ್ತು.
ನಾಲ್ಕು ರೀತಿಯ ಕ್ಷಿಪಣಿಗಳನ್ನು ಹಾರಿಸುವ ಸಾಮರ್ಥ್ಯವಿರುವ S-400 ಯುದ್ಧ ವಿಮಾನಗಳು, ಡ್ರೋನ್‌ಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಖಂಡಾಂತರ ಕ್ಷಿಪಣಿ ಗಳನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಇದರ ಮುಂದುವರಿದ ಶ್ರೇಣಿಯ ರಾಡಾರ್ ಏಕಕಾಲದಲ್ಲಿ 100 ಕ್ಕೂ ಹೆಚ್ಚು ಗುರಿಗಳನ್ನು ಟ್ರ್ಯಾಕ್ ಮಾಡುವಷ್ಟು ಶಕ್ತಿ ಶಾಲಿಯಾಗಿದೆ.